newsics.com
ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಇಬ್ಬರು ಗೆಳತಿಯರ ಜೊತೆ ಸೇರಿ ಪತ್ನಿಯನ್ನೇ ಹತ್ಯೆಗೈದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
ತನ್ನ ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ತಿಳಿದ ಬಳಿಕ ಆತ ತನ್ನ ಗೆಳತಿಯರ ಸಹಾಯದಿಂದ ಪತ್ನಿಯನ್ನು ಕೊಂದಿದ್ದಾನೆ. ಬಂಧಿತ ಆರೋಪಿಯನ್ನು ಪ್ರದ್ಯುಮ್ನ ಕುಮಾರ್ ದಾಸ್ ಎಂದು ಗುರುತಿಸಲಾಗಿದೆ. ಕೊಲೆಯಾದ ಮಹಿಳೆಯನ್ನು ಸುಭಾಶ್ರೀ ಎಂದು ಗುರುತಿಸಲಾಗಿದೆ. ಆಕೆ ಅಕ್ಟೋಬರ್ 28 ರಂದು ಸಾವನ್ನಪ್ಪಿದ್ದಳು. ಈ ವೇಳೆ ಪತಿ ಆಕೆಯ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಿಕೊಂಡಿದ್ದ. ಮರಣೋತ್ತರ ಪರೀಕ್ಷೆಯ ಆಧಾರದ ಮೇಲೆ ಮಹಿಳೆಯ ಪತಿಯನ್ನು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿ ದಾಸ್ ಇಬ್ಬರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈತನ ಅನೈತಿಕ ಸಂಬಂಧ ಪತ್ನಿಗೆ ತಿಳಿದು ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಎಂಟು ತಿಂಗಳಿಂದ ಸುಭಾಶ್ರೀ ಪೋಷಕರ ಮನೆಯಲ್ಲಿ ವಾಸವಾಗಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ