newsics.com
ಬೆಂಗಳೂರು: ಸರ್ದಾರ್ ಪಟೇಲ್ ಜಯಂತಿ ಹಾಗೂ ಇಂದಿರಾಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಏನೋ ಮಾತನಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿದ್ದಾರೆ.
ಮಾತಿನ ಭರದಲ್ಲಿ ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಎನ್ನುವ ಬದಲು ಬಾಯ್ತಪ್ಪಿನಿಂದ ಸೋನಿಯಾ ಗಾಂಧಿ ಎಂದು ಹೇಳಿದ್ದಾರೆ. ತಪ್ಪಿನ ಅರಿವಾಗಿ ಕೂಡಲೇ ಕ್ಷಮೆ ಕೋರಿ, ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಎಂದಿದ್ದಾರೆ.
ವಲ್ಲಭಭಾಯಿ ಪಟೇಲ್ ಅವರು ದೇಶ ಒಗ್ಗೂಡಿಸುವುದಕ್ಕೆ ಪ್ರಯತ್ನ ಪಟ್ಟರು. ಆ ಒಗ್ಗಟ್ಟನ್ನು ಕಾಪಾಡುವುದಕ್ಕೆ ಇಂದಿರಾಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಪ್ರಾಣ ಕೊಟ್ಟರು ಎನ್ನುವ ಮೂಲಕ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡರು. ಬಳಿಕ ಸಾವರಿಸಿಕೊಂಡ ಖರ್ಗೆ, ದಿನ ಹೇಳಿ ಹೇಳಿ ಈ ರೀತಿ ಆಗುತ್ತಿದೆ. ಮೀಡಿಯಾದವರು ಇದನ್ನು ಹೈಲೈಟ್ ಮಾಡಬೇಡಿ ಎಂದು ಮನವಿ ಮಾಡಿದರು.
ನಾನು ಮಾತನಾಡಿದ ಮೇಲೆ ಯಾರೂ ಮಾತನಾಡುವಂತಿಲ್ಲ ಎಂದು ಸಭೆ ಆಯೋಜಕರಿಗೆ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದರು. ಇದಕ್ಕೂ ಮೊದಲು ವೀರಪ್ಪ ಮೊಯ್ಲಿ ಮಾತನಾಡಿದ್ರು, ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಂತರ ಡಿಸಿಎಂ ಡಿಕೆ ಶಿವಕುಮಾರ ಮಾತನಾಡ್ತಾರೆ ಎಂದು ಸಂಸದ ಜಿಸಿ ಚಂದ್ರಶೇಖರ್ ಹೇಳಿದರು.
ಈ ವೇಳೆ ಎಐಸಿಸಿ ಅಧ್ಯಕ್ಷರು ಮಾತನಾಡಲಿ ಬಳಿಕ ಮಾತನಾಡ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಆದರೆ ಭಾಷಣ ಆರಂಭಿಸುವ ಮುನ್ನ ನಾನು ಮಾತನಾಡಿದ ಮೇಲೆ ಯಾರೂ ಮಾತನಾಡುವಂತಿಲ್ಲ ಎಂದು ಖರ್ಗೆ ಹೇಳಿದರು. ಅಷ್ಟಾದರೂ ಖರ್ಗೆ ಭಾಷಣ ಬಳಿಕ ಡಿಕೆ ಶಿವಕುಮಾರ ಮಾತನಾಡಿದರು.