newsics.com
ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಬಾಬಾ ಸಿದ್ದಿಕ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಶನಿವಾರ ಸಂಜೆ ಮುಂಬೈನಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೂಲಗಳ ಪ್ರಕಾರ ಸಿದ್ದಿಕ್ ಮೇಲೆ ಮೂರು ಗುಂಡುಗಳು ಹಾರಿವೆ.
ತಕ್ಷಣವೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಕೆಲವೇ ಸಮಯದಲ್ಲಿ ಕೊನೆಯುಸಿರೆಳೆದರು.
ಬಾಂದ್ರಾ ಬಾಯ್ ಎಂದೂ ಕರೆಸಿಕೊಳ್ಳುತ್ತಿದ್ದ ಸಿದ್ದಿಕ್ ಬಾಲಿವುಡ್ ನಟರಾದ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಅವರ ಆಪ್ತ.
ಬಾಬಾ ಸಿದ್ದಿಕ್ 1999, 2004 ಮತ್ತು 2009ರಲ್ಲಿ ಸತತ ಮೂರು ಅವಧಿಗೆ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ಮತ್ತು ಎಫ್‌ಡಿಎ ರಾಜ್ಯ ಸಚಿವರಾಗಿದ್ದರು. ಈ ವರ್ಷದ ಫೆಬ್ರವರಿಯಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.