newsics.com
ದೆಹಲಿ: ಮೂತ್ರ ವಿಸರ್ಜನೆ ವೇಳೆ ತೊಂದರೆಯಾಗುವುದು, ನ್ಯೂಮೋನಿಯಾ, ಟೈಫಾಯ್ಡ್ ಸೇರಿ ಹಲವು ಕಾಯಿಲೆಗಳು ಆ್ಯಂಟಿ ಬಯೋಟಿಕ್‌ಗಳಿಗೂ ಬಗ್ಗುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.
ದೇಶಾದ್ಯಂತ ಇರುವ ಕ್ಲಿನಿಕ್‌ಗಳು ಹಾಗೂ ದೊಡ್ಡ ಆಸ್ಪತ್ರೆಗಳಿಂದ ಅಂಕಿ – ಅಂಶ ಸಂಗ್ರಹಿಸಿ ಈ ವಿಸ್ತೃತ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಯಾರಿಸಿದೆ.
ಈ ಹಿಂದೆ ನ್ಯೂಮೋನಿಯಾ, ರಕ್ತ ಸಂಬಂಧಿ ಕಾಯಿಲೆಗಳು, ಟೈಫಾಯ್ಡ್ ಸೇರಿ ಹಲವು ಕಾಯಿಲೆಗಳು ಬಂದಾಗ ಆ್ಯಂಟಿ ಬಯೋಟಿಕ್‌ಗಳನ್ನು ಕೊಟ್ಟರೆ, ತ್ವರಿತವಾಗಿ ಕಾಯಿಲೆ ವಾಸಿಯಾಗುತ್ತಿತ್ತು. ಆದರೆ, ಇತ್ತೀಚೆಗೆ ಇದೇ ಆ್ಯಂಟಿ ಬಯೋಟಿಕ್‌ಗಳನ್ನು ನೀಡಿದರೂ ಕಾಯಿಲೆಗಳು ವಾಸಿಯಾಗುತ್ತಿಲ್ಲ ಎಂಬುದಾಗಿ ICMR ವರದಿ ತಿಳಿಸಿದೆ.
ಇನ್ನು ಕಾಯಿಲೆಗಳ ವಿರುದ್ಧ ಹೋರಾಡಬೇಕಾದ ಔಷಧಗಳೇ ದುರ್ಬಲವಾಗಿವೆ. ಕಾಯಿಲೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ತೀವ್ರತೆ ಜಾಸ್ತಿಯಾದ ಕಾರಣದಿಂದಾಗಿ ಆ್ಯಂಟಿ ಬಯೋಟಿಕ್‌ಗಳು ಕೂಡ ದುರ್ಬಲ ಎಂಬಂತಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣದಿಂದಾಗಿ, ಹಲವು ಕಾಯಿಲೆಗಳಿಗೆ ತುತ್ತಾದವರು ದೀರ್ಘಾವಧಿಗೆ ಹಾಸಿಗೆ ಹಿಡಿಯುವ ದುಸ್ಥಿತಿ ಎದುರಾಗಿದೆ .