newsics.com
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆ ಮೇಲೆ ನಡೆದಂತಹ ಕ್ರೌರ್ಯ ಕ್ಷಮಿಸಲಾಗದ ಕೃತ್ಯವಾಗಿದೆ. ಆರೋಪಿ ಸಂತ್ರಸ್ತೆಯನ್ನು ಅಮಾನುಷವಾಗಿ ಥಳಿಸಿ, ನಂತರ ಅತ್ಯಾಚಾರವೆಸಗಿ ಕೊನೆಗೆ ಕೊಲೆಗೈದಿದ್ದಾನೆ. ಈ ಕ್ರೌರ್ಯ ಸದ್ಯ ಎಲ್ಲರನ್ನೂ ಅಳುವಂತೆ ಮಾಡಿದೆ. ಇನ್ನು ಈ ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸುವಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಆರಂಭದಲ್ಲಿಯೇ ಕೊಲೆ ಪ್ರಕರಣವನ್ನು ಏಕೆ ದಾಖಲಿಸಲಿಲ್ಲ ಮತ್ತು ಅಸಹಜ ಸಾವಿನ ಪ್ರಕರಣವನ್ನು ಏಕೆ ಪ್ರಾರಂಭಿಸಲಾಯಿತು ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿ, ನಂತರ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆದೇಶ ಹೊರಡಿಸಿದೆ.
ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ ಸಂದೀಪ್ ಘೋಷ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕಿತ್ತು, ಘೋಷ್ ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿ ಏಕೆ ನೇಮಕಗೊಂಡರು ಎಂದು ಪೀಠವು ರಾಜ್ಯ ಸರ್ಕಾರದ ವಕೀಲರನ್ನು ಪ್ರಶ್ನಿಸಿತು. ಈ ಎಲ್ಲಾ ಪ್ರಶ್ನೆಗಳ ನಂತರ ಕಲ್ಕತ್ತಾ ಹೈಕೋರ್ಟ್ ಈ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲು ಆದೇಶಿಸಿತು. ಜೊತೆಗೆ ಪ್ರಕರಣ ಕುರಿತಂತೆ ಎಲ್ಲಾ ಮುಖ್ಯ ದಾಖಲೆಗಳನ್ನು ಸಿಬಿಐಗೆ ಆಗಸ್ಟ್ 14, ಬುಧವಾರದೊಳಗೆ ಒಪ್ಪಿಸಬೇಕೆಂದು ರಾಜ್ಯ ಪೊಲೀಸ್ಗೆ ಹೈಕೋರ್ಟ್ ಆದೇಶ ಹೊರಡಿಸಿದೆ.