newsics.com
ಬಿಜೆಪಿ ಸಂಸದ ಜಗದಾಂಬಿಕ ಪಾಲ್ ಅವರು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆ 2024ರ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷರಾಗಿರುತ್ತಾರೆ. ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಗಸ್ಟ್ 8ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಸದನವು ಈ ಮಸೂದೆಯ ಉದ್ದೇಶಿತ ತಿದ್ದುಪಡಿಗಳ ಕುರಿತು ಸಂಕ್ಷಿಪ್ತ ಚರ್ಚೆಯನ್ನು ನಡೆಸಿತು. ಹೆಚ್ಚಿನ ಪರಿಶೀಲನೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿತ್ತು.
8.5 ಲಕ್ಷ ಆಸ್ತಿಗಳನ್ನು ಒಳಗೊಂಡಿರುವ ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ಮಾಡಲು ಈ ಮಸೂದೆ ಶಿಫಾರಸು ಮಾಡಿದೆ. ಬಿಜೆಪಿಯ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ ಯುನೈಟೆಡ್ (ಜೆಡಿಯು) ಮಸೂದೆಗೆ ಸಂಪೂರ್ಣ ಬೆಂಬಲವನ್ನು ನೀಡಿತು. ಆದರೆ ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಎಐಎಂಐಎಂ ಸೇರಿದಂತೆ ಪ್ರತಿಪಕ್ಷಗಳು ಇದನ್ನು ಬಲವಾಗಿ ವಿರೋಧಿಸಿದವು. ಈ ಬಗ್ಗೆ ಇದೀಗ ತಾತ್ಕಾಲಿಕ ಜಂಟಿ ಸಂಸದೀಯ ಸಮಿತಿಯನ್ನು 31 ಸದಸ್ಯರೊಂದಿಗೆ ರಚಿಸಲಾಗಿದೆ. 21 ಸದಸ್ಯರು ಲೋಕಸಭೆಯಿಂದ ಮತ್ತು 10 ಸದಸ್ಯರು ರಾಜ್ಯಸಭೆಯಿಂದ ಆಯ್ಕೆಯಾಗಿದ್ದಾರೆ.