newsics.com
ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು (Dengue Fever) ಕಂಡುಬಂದಿರುವ 10 ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಉಪನಿರ್ದೇಶಕರು ತೆರಳಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಇಂದು ಸೂಚನೆ ನೀಡಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಗಳ ಜತೆ ಸಭೆ ನಡೆಸಿದ ಸಚಿವರು, ಮಳೆ, ಪ್ರವಾಹದ ನಡುವೆ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನ ಕಡಿಮೆಯಾಗಬಾರದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 37 ಡೆಂಗ್ಯೂ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಬಿಬಿಎಂಪಿ ಅಧಿಕಾರಿಗಳ ಸಹಯೋಗದೊಂದಿಗೆ ಹೆಚ್ಚಿನ ನಿಗಾ ವಹಿಸುವಂತೆ ಸಚಿವ ದಿನೇಶ್ ಗುಂಡೂರಾವ್, ಇದೇ ವೇಳೆ ಅಧಿಕಾರಿಗಳಿಗೆ ತಿಳಿಸಿದರು.
ಇಷ್ಟರೊಳಗೆ ಡೆಂಗ್ಯೂ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಮುಖ ಕಂಡುಬರಬೇಕಿತ್ತು. ಆರೋಗ್ಯ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುತ್ತಿದ್ದರೂ, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಪ್ರಕರಣಗಳು ವರದಿಯಾಗುತ್ತಿರುವುದನ್ನು ನೋಡಿದರೆ ಇನ್ನೂ ಎರಡು ತಿಂಗಳು ನಾವು ಅಲರ್ಟ್ ಆಗಿರಬೇಕು. ಹೀಗಾಗಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಹಕಾರ ನೀಡಿ ಡೆಂಗ್ಯೂ ಹತೋಟಿಗೆ ತರುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದಿದ್ದಾರೆ.
ಜನರಲ್ಲಿ ಡೆಂಗ್ಯೂ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಆದರೆ ಡೆಂಗ್ಯೂ ಹತೋಟಿಗೆ ತರುವ ಕ್ರಮಗಳು ಸ್ಥಳದಲ್ಲಿ ಅನುಷ್ಠಾನಗೊಳ್ಳುವುದು ಅತಿ ಮುಖ್ಯವಾಗಿದೆ. ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮ ಅಭಿಯಾನದ ರೀತಿಯಲ್ಲಿ ನಡೆಯಬೇಕು ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಶೇಷವಾಗಿ ಆರೋಗ್ಯ ಇಲಾಖೆಯ ಉಪ ನಿರ್ದೇಶಕರ ಮಟ್ಟದ ಅಧಿಕಾರಿಗಳು ಡೆಂಗ್ಯೂ ಹೆಚ್ಚಿರುವ ಹಾಟ್‌ಸ್ಪಾಟ್‌ಗಳಿಗೆ ಕೇವಲ ಭೇಟಿ ಕೊಡುವುದಲ್ಲ. ಎರಡು ಮೂರು ದಿನಗಳವರೆಗೆ ಸ್ಥಳದಲ್ಲೇ ಇದ್ದು ಮಾನಿಟರ್ ಮಾಡಬೇಕು. ಸ್ಥಳದಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮಗಳು ಅನುಷ್ಠಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಆಗಿ ತಿಳಿಸಿದ್ಣಾರೆ.