newsics.com
ಐಪಿಎಲ್‌ನಲ್ಲಿ ತಾನಾಡಿದ ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಜರಾತ್ ಟೈಟಾನ್ಸ್ ತಂಡವು ಮಾರಾಟಕ್ಕಿದೆ. ಹೌದು, ಹೀಗೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಖಾಸಗಿ ಉದ್ಯಮವಾಗಿರುವ ಸಿವಿಸಿ ಕ್ಯಾಪಿಟಲ್, ಗುಜರಾತ್ ಟೈಟಾನ್ಸ್ ತಂಡದ ಬಹುತೇಕ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ದಿ ಎಕಾನಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, ಹೊಸ ತಂಡಗಳು ತಮ್ಮ ಪಾಲನ್ನು ಮಾರಾಟ ಮಾಡುವುದನ್ನು ತಡೆಯುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಲಾಕ್-ಇನ್ ಅವಧಿಯು ಫೆಬ್ರವರಿ 2025 ರಲ್ಲಿ ಕೊನೆಗೊಳ್ಳುತ್ತದೆ. ಇದರ ಬೆನ್ನಲ್ಲೇ ಸಿವಿಸಿ ಕ್ಯಾಪಿಟಲ್ಸ್ ಗುಜರಾತ್ ಟೈಟಾನ್ಸ್ ತಂಡದ ಅಲ್ಪ ಷೇರುಗಳನ್ನು ಮಾತ್ರ ಉಳಿಸಿಕೊಳ್ಳಲು ಮುಂದಾಗಿದೆ.
ಸದ್ಯ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೂರು ವರ್ಷ ಹಳೆಯದಾದ ಫ್ರಾಂಚೈಸಿಯಾಗಿದ್ದು, ಗುಜರಾತ್ ಟೈಟಾನ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ ಒಂದರಿಂದ ಒಂದೂವರೆ ಬಿಲಿಯನ್ ಡಾಲರ್ ಆಗಿದೆ ಎಂದು ಅಂದಾಜಿಸಲಾಗಿದೆ. 2021ರಲ್ಲಿ ಸಿವಿಸಿ ಕ್ಯಾಪಿಟಲ್ಸ್, ಬರೋಬ್ಬರಿ 745 ಮಿಲಿಯನ್ ಡಾಲರ್ ನೀಡಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯನ್ನು ಖರೀದಿಸಿತ್ತು. ಇದೀಗ ಗುಜರಾತ್ ಫ್ರಾಂಚೈಸಿಯನ್ನು ಖರೀದಿಸಲು ಅದಾನಿ ಗ್ರೂಪ್ ಹಾಗೂ ಟೊರೆಂಟ್ ಗ್ರೂಪ್ ಒಲವು ತೋರಿವೆ ಎನ್ನಲಾಗುತ್ತದೆ.