newsics.com
ನವದೆಹಲಿ:ಇಂದಿನಿಂದ 18ನೇ ಲೋಕಸಭೆ ಯ ಮೊದಲ ಅಧಿವೇಶನ ಪ್ರಾರಂಭವಾಗಲಿದ್ದು, ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ 26ರಂದು ಲೋಕಸಭಾ ಸ್ಪೀಕರ್ ಆಯ್ಕೆ ನಡೆಯಲಿದ್ದು, 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬಿಜೆಪಿ ನಾಯಕ ಮತ್ತು ಏಳು ಬಾರಿ ಸಂಸದರಾಗಿ ಅನುಭವ ಹೊಂದಿರುವ ಭರ್ತೃಹರಿ ಮಹತಾಬ್ ಅವರನ್ನು ಪ್ರಸ್ತುತ ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ.
ರಾಷ್ಟ್ರಪತಿ ಶಿಷ್ಟಾಚಾರ ಮೀರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವ ಆರೋಪ ಕೇಳಿ ಬಂದಿದೆ. ಈ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ. ಸುರೇಶ್ ಅವರ ಹೆಸರನ್ನು ಸೂಚಿಸಲಾಗಿದ್ದರೂ, ಸರ್ಕಾರ ಕಡೆಗಣಿಸಿದೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಸೃಷ್ಟಿಯಾಗಿರುವ ವಿವಾದವು ಅಧಿವೇಶನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರತಿಪಕ್ಷಗಳು ರಾಷ್ಟ್ರಪತಿ ಮತ್ತು ಕೇಂದ್ರದ ನಡೆಯನ್ನು ಟೀಕಿಸಿವೆ
ಮಹತಾಬ್ ಅವರು ಸತತವಾಗಿ ಏಳು ಬಾರಿ ಲೋಕಸಭೆ ಸದಸ್ಯರಾಗಿದ್ದು, ಹಂಗಾಮಿ ಸ್ಪೀಕರ್ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತಿಪಾದಿಸಿದ್ದಾರೆ. ಸುರೇಶ್ ಅವರು 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದರು ಎಂದೂ ಅವರು ಹೇಳಿದ್ದಾರೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಮಹತಾಬ್ ಅವರಿಗೆ ಇಂದು ಬೆಳಿಗ್ಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಬಳಿಕ ಮಹತಾಬ್ ಅವರು ಸಂಸತ್ ಭವನ ತಲುಪಿ, ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಅಧಿವೇಶನ ಆರಂಭಿಸಲಿದ್ದಾರೆ.