newsics.com/ನ್ಯೂಸಿಕ್ಸ್
ಪ್ರತಿಭಾವಂತ ಬರಹಗಾರ, ಕಿರುತೆರೆ ಸಂಭಾಷಣೆಕಾರ ಟಿ.ಜಿ. ನಂದೀಶ್ ಬುಧವಾರ (ಮೇ 20) ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
ಆರೋಗ್ಯವಂತರಾಗಿಯೇ ಇದ್ದ ನಂದೀಶ್ ಇದ್ದಕ್ಕಿದ್ದಂತೆ ಸಾವಿಗೀಡಾಗಿದ್ದು ಹೇಗೆ ಎನ್ನುವ ಚರ್ಚೆ ಜೋರಾಗಿದ್ದು, ಹೃದಯಾಘಾತದಿಂದ ನಿಧನರಾದರು ಎಂದೇ ಸುದ್ದಿ ಹರಿದಾಡುತ್ತಿರುವಾಗ, ಧಾರಾವಾಹಿ ನಿರ್ಮಾಪಕ, ಸಂಭಾಷಣೆಕಾರ, ಲೇಖಕ ಡಿ.ಎಸ್. ಶ್ರೀನಿಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡ ವಿಚಾರ ಹೊಸ ಕಾರಣವನ್ನೇ ಹೇಳುತ್ತಿದೆ.
ಶ್ರೀನಿಧಿ ಪ್ರಕಾರ, ನಂದೀಶ್ ಸಾವಿಗೆ ಹೃದಯಾಘಾತ ಕಾರಣವಲ್ಲ, ಗ್ಯಾಸ್ಟ್ರಿಕ್‌ನಿಂದ ವಾಂತಿಯಾಗಿದೆ. ಆಗ ಆಹಾರದ ಕಣ ಶ್ವಾಸಕೋಶಕ್ಕಿಳಿದು ನಂದೀಶ್ ಸಾವಾಗಿದೆ.
ಫೇಸ್‌ಬುಕ್ ಖಾತೆಯಲ್ಲಿ ಶ್ರೀನಿಧಿ ಅವರ ಬರವಣಿಗೆ ಹೀಗಿದೆ:
ಈ ಪೋಸ್ಟ್ ಬರೆಯಬೇಕೋ ಬೇಡವೋ ಎನ್ನುವ ಜಿಜ್ಞಾಸೆಯಲ್ಲೇ ಬರೆಯುತ್ತಿದ್ದೇನೆ.
ಕೇವಲ 36ರ ಹರೆಯದಲ್ಲೇ, ಇಬ್ಬರು ಪುಟ್ಟ ಮಕ್ಕಳನ್ನು ಹಾಗೂ ತುಂಬು ಕುಟುಂಬವನ್ನು ಅಗಲಿ ಹೋದ ನಂದೀಶ್ ಅಗಲಿಕೆ ನಮಗೆಲ್ಲ ತೀವ್ರ ಆಘಾತವನ್ನುಂಟು ಮಾಡಿದೆ. ಚೆನ್ನಾಗಿ ಬರೆಯುತ್ತಿದ್ದ ನಂದೀಶ್, ಬಹಳ ಒಳ್ಳೆಯ ಮನುಷ್ಯ. ಏನೇ ತಪ್ಪು ಕಂಡರೂ ಅದನ್ನ ಪ್ರಾಮಾಣಿಕವಾಗಿ- ವಿನೀತವಾಗಿ ಹೇಳುವ ಮತ್ತು ಅದನ್ನ ಸಾತ್ವಿಕವಾಗಿ ಪ್ರತಿಭಟಿಸುತ್ತಿದ್ದ ಮನುಷ್ಯ. ಹೀಗಾಗಿಯೇ ಈ ಹೊತ್ತಿನಲ್ಲಿ ಈ ಮಾಹಿತಿ ಹಂಚಿಕೊಳ್ಳದೇ ಹೋದರೆ ತಪ್ಪಾಗುತ್ತದೆ ಅನ್ನಿಸಿತು.
ನಂದೀಶ್ ಅವ್ರ ಹಠಾತ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮಗಿಷ್ಟ ಬಂದ ಹಾಗೆ ಇಲ್ಲಸಲ್ಲದ ಊಹೆಗಳನ್ನು, ಸುಳ್ಳು ವದಂತಿಗಳನ್ನು ಹರಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ದಯವಿಟ್ಟು ಇಂತಹ ಸೂಕ್ಷ್ಮ ಸಮಯದಲ್ಲಿ ಯಾರಿಗೂ ನೋವುಂಟು ಮಾಡುವ ಬೇಜವಾಬ್ದಾರಿ ಮಾತುಗಳನ್ನಾಡಬೇಡಿ.
ಸತ್ಯ ಏನೆಂದರೆ: ನಂದೀಶ್ ಗೆ ಆಗಿದ್ದು ಯಾವುದೇ ರೀತಿಯ ಸಡನ್ ಆದ ಹೃದಯಾಘಾತವಲ್ಲ. ಅವರಿಗೆ ಯಾವ ಹೃದಯದ ಸಮಸ್ಯೆ ಕೂಡ ಇರಲಿಲ್ಲ. ಇತ್ತೀಚಿಗಷ್ಟೇ ಫುಲ್ ಬಾಡಿ ಚೆಕ್ ಅಪ್ ಮಾಡಿಸಿದ್ದ ನಂದೀಶ್ ಆರೋಗ್ಯವಾಗೇ ಇದ್ದರು. ಇವತ್ತು ಅವರಿಗೆ ಗ್ಯಾಸ್ಟ್ರಿಕ್ ಆಗಿತ್ತು. ಊಟ ಮಾಡಿ, ಇಂದು ಮಧ್ಯಾಹ್ನ ಮಲಗಿದ್ದಾಗ ಅದೇ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ವಾಂತಿಯಾಗಿ, ಆಹಾರದ ಕಣಗಳು ಆಕಸ್ಮಿಕವಾಗಿ ಶ್ವಾಸಕೋಶಕ್ಕೆ ಪ್ರವೇಶಿಸಿವೆ-. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿ, ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿನಲ್ಲಿ.. ಈ ದುರಂತ ಸಂಭವಿಸಿದೆ. ಇದೊಂದು ದುರದೃಷ್ಟಕರ, ಆಕಸ್ಮಿಕ ದುರ್ಘಟನೆಯೇ ಹೊರತು ಬೇರೇನೂ ಅಲ್ಲ.
ಸಾವಿನಲ್ಲೂ ಮಸಾಲೆ ಹುಡುಕುವ ಜಗತ್ತಿನಲ್ಲಿ, ಒಳ್ಳೆಯ ಜೀವಕ್ಕೆ ಹಾಗೂ ಅವರ ಕುಟುಂಬದ ಖಾಸಗಿತನಕ್ಕೆ ಗೌರವ ಕೊಡೋದನ್ನ ಕಲಿಯೋಣ. ಸುಳ್ಳು ಸುದ್ದಿಗಳನ್ನು ಹರಡುವುದನ್ನು ದಯವಿಟ್ಟು ನಿಲ್ಲಿಸೋಣ. ಒಂದು ದುರಂತಮಯ ಸಾವನ್ನ ನಿಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಡಿ. ನಿಮ್ಮ ಪ್ರಪಗಾಂಡ,ಅಜೆಂಡಾಗಳನ್ನ ಬೇರೆ ಹೊತ್ತಿನಲ್ಲಿ ಬಳಸಿ.
ಆ ಭಗವಂತ ಅವರ ಪತ್ನಿ ಹಾಗೂ ಪುಟ್ಟ ಮಕ್ಕಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ.
(ಅವರ ಕುಟುಂಬಸ್ಥರ ಕಡೆಯಿಂದಲೇ ಬಂದ ಮಾಹಿತಿ ಇದು)*
https://www.facebook.com/share/p/1CRk3c1ozA/
https://www.facebook.com/share/p/1CRk3c1ozA/

T G Nandeesh no more ಕಿರುತೆರೆ ಸಂಭಾಷಣೆಕಾರ, ಪ್ರತಿಭಾವಂತ ಬರಹಗಾರ ಟಿ.ಜಿ. ನಂದೀಶ್ ಇನ್ನಿಲ್ಲ