newsics.com/ನ್ಯೂಸಿಕ್ಸ್
ನಟ ದಿಲೀಪ್ ರಾಜ್ ಅವರ ಸಾವಿನ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.
ಈ ಕುರಿತು ಮಾತನಾಡಿದ ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞರೂ, ಸಂಸದರೂ ಆಗಿರುವ ಡಾ ಮಂಜುನಾಥ್ ಅವರು ದಿಲೀಪ್ ಅವರ ಹಠಾತ್ ಸಾವಿನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನನಗೆ ಗೊತ್ತಿರುವ ಪ್ರಕಾರ, ದಿಲೀಪ್ ರಾಜ್ಗೆ ಅವರಿಗೆ ಹಿಂದಿನ ದಿನ ಎದೆ ಉರಿ ಕಾಣಿಸಿಕೊಂಡಿತ್ತಂತೆ. ಎದೆಯಲ್ಲಿ ಡಿಸ್ಕಂಫರ್ಟ್ (ಅಸ್ವಸ್ಥತೆ) ಕಾಣಿಸಿಕೊಂಡಿತ್ತು. ಆದರೆ ಅದನ್ನು ಅವರು ಉಪೇಕ್ಷಿಸಿದರು. ಗ್ಯಾಸ್ಟ್ರಿಕ್ ಇರಬಹುದು ಎಂದು ಅದರ ಬಗ್ಗೆ ಗಮನ ಹರಿಸಲಿಲ್ಲ. ಈಗ 20 ರಿಂದ 25 ಪರ್ಸೆಂಟ್ ಹಾರ್ಟ್ ಅಟ್ಯಾಕ್, ಗ್ಯಾಸ್ಟ್ರಿಟಿಸ್ ರೂಪದಲ್ಲಿ ಕಾಣಿಸಿಕೊಳ್ಳುತ್ತೆ. ಕೆಲವರು ‘ಓ ಖಾರ ತಿಂದ್ಬಿಟ್ಟಿದ್ದೀನಿ’ ಅಥವಾ ‘ಡ್ರಿಂಕ್ಸ್ ಮಾಡ್ಬಿಟ್ಟಿದ್ದೀನಿ’ ಎಂದುಕೊಂಡು ಅದನ್ನ ನಿರ್ಲಕ್ಷ್ಯ ಮಾಡುತ್ತಾರೆ. ಅದು ಸರಿಯಲ್ಲ’ ಎಂದು ಮಂಜುನಾಥ್ ಹೇಳಿದ್ದಾರೆ.
‘ಇನ್ನು ಕೆಲವರಿಗೆ ಹೃದಯಾಘಾತ ಆಗುವ ಮುಂಚೆ ಗಂಟಲು ನೋವು ಬರಬಹುದು, ಅಥವಾ ದವಡೆಯಲ್ಲಿ ನೋವು ಬರಬಹುದು. ಇನ್ನು ಕೆಲವರಿಗೆ ಬೆನ್ನಿನ ಮೇಲ್ಭಾಗದಲ್ಲಿ ನೋವು ಬರಬಹುದು. ಆ ನೋವುಗಳನ್ನು, ಆ ಸೂಚನೆಗಳನ್ನು ನಾವು ನಿರ್ಲಕ್ಷ್ಯ ಮಾಡಬಾರದು. ನಾವುಗಳು ರಕ್ತದ ಒತ್ತಡ, ಸಕ್ಕರೆ ಅಂಶ, ಕೊಲೆಸ್ಟ್ರಾಲ್ ಇದೆಲ್ಲವನ್ನೂ ನಾವು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು, ಆದರೆ ಅತಿಯಾದ ವ್ಯಾಯಾಮವೂ ಸಹ ಒಳ್ಳೆಯದಲ್ಲ’ ಎಂದು ವೈದ್ಯ ಮಂಜುನಾಥ್ ಹೇಳಿದ್ದಾರೆ.
‘ನೈಸರ್ಗಿಕವಾದ ಪ್ರೋಟೀನ್ ಅನ್ನು ಸೇವಿಸುವುದಕ್ಕೆ ನಾವು ಹೆಚ್ಚು ಒತ್ತು ನೀಡಬೇಕು.ಮೊಳಕೆ ಕಾಳುಗಳು ಆಗಬಹುದು, ಬೇಳೆಕಾಳುಗಳು ಆಗಬಹುದು, ಮೊಟ್ಟೆ ಆಗಬಹುದು, ಹಣ್ಣು, ತರಕಾರಿಗಳು ಹೆಚ್ಚು ಸೇವನೆ ಮಾಡಬೇಕು. ಇತ್ತೀಚೆಗೆ ಬೇಗ ಸಾಧನೆ ಮಾಡುವ ಹಪಹಪಿ ಎಲ್ಲರಲ್ಲೂ ಹೆಚ್ಚಾಗಿದೆ, ನಾನು ಬೇಗ ಕರಿಯರ್ ಬಿಲ್ಡ್ ಮಾಡಬೇಕು’ ಅನ್ನೋ ಅತಿಯಾದ ಆಸೆ ಒಂದಿದೆ, ಯಾವುದೇ ಕ್ಷೇತ್ರ ಆಗಬಹುದು ಅದು. ಅದು ವೃತ್ತಿಪರ ಕ್ಷೇತ್ರ ಆಗಬಹುದು, ವೃತ್ತಿ ಬೇರೆ ತರ… ಆಮೇಲೆ ಏನಾಗಿದೆ ಸಂತೋಷ ಇಲ್ಲ, ನೆಮ್ಮದಿ ಇಲ್ಲ, ನಿದ್ದೆ ಇಲ್ಲ ಇವುಗಳಿಂದ ದೇಹದ ಮೇಲೆ ಒತ್ತಡ ಹೆಚ್ಚಾಗಿದೆ’ ಎಂದು ಮಂಜುನಾಥ್ ಅವರು ವಿವರಿಸಿದ್ದಾರೆ.
ದಿಲೀಪ್ ರಾಜ್ ಅವರು ನಟರಾಗಿದ್ದ ಜೊತೆಗೆ ನಿರ್ಮಾಪಕರೂ ಆಗಿದ್ದರು. ದಿಲೀಪ್ ರಾಜ್ ಅಗಲಿಕೆ ಬಳಿಕ ಟಿವಿ ಲೋಕದಲ್ಲಿನ ಒತ್ತಡದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಒಬ್ಬ ಅದ್ಭುತವಾದ ನಟ, ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ. ಅವರ ಕುಟುಂಬವನ್ನು ಒಬ್ಬಂಟಿ ಮಾಡಿ ಹೋಗಿದ್ದಾರೆ.