newsics.com/ನ್ಯೂಸಿಕ್ಸ್
ಮುಂಬೈ : ಅಸಮಾನತೆ ಈಗಲೂ ಸಾಮಾಜಿಕ ಪಿಡುಗಾಗಿ ಬೇರುಬಿಟ್ಟಿದೆ ಎನ್ನುವುದನ್ನು ಇದು ಮತ್ತೊಮ್ಮೆ ನೆನಪಿಸಿದೆ. ತಮ್ಮದೇ ಸಮುದಾಯದ ಯುವಕನೊಬ್ಬ ದೇವಸ್ಥಾನ ಪ್ರವೇಶಿಸಿರುವುದನ್ನು ಪ್ರಶ್ನಿಸಿರುವ ಗುಂಪೊಂದು ಮಹಿಳೆಯರಿಗೆ ಚಪ್ಪಲಿ ಹಾರ ಹಾಕಿ ಅರೆನಗ್ನ ಮೆರವಣಿಗೆ ಮಾಡಿ ಮಾನವೀಯತೆಯನ್ನೇ ಮರೆತು ಮೃಗೀಯವಾಗಿ ವರ್ತಿಸಿದೆ. ಈ ಘಟನೆ ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ನಡೆದಿದೆ.
ಮಹಿಳೆಯರು ಮತ್ತು ಅವರ ಮನೆಯವರು ತಮಗೆ ವಿಧಿಸಿದ್ದ ಸಾಮಾಜಿಕ ಬಹಿಷ್ಕಾರವನ್ನು ವಿರೋಧಿಸಿದ್ದರಿಂದ ಈ ರೀತಿ ಅಮಾನುಷವಾಗಿ ನಡೆದುಕೊಳ್ಳಲಾಗಿದೆ.
ರಜಪೂತ್ ಜಾತಿ ಪಂಚಾಯತ್ ಈ ಹಿಂದೆ ಅದರದ್ದೇ ಸಮುದಾಯದ ಕುಟುಂಬವೊಂದಕ್ಕೆ ದೇವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿತ್ತು. ಆದರೆ ದೇವಾಲಯಕ್ಕ ಭೇಟಿ ನೀಡುವ ಮೂಲಕ ಈ ಕುಟುಂಬ ದೇವರೂ ತಮಗೂ ಸೇರಿದವನು ಎಂದು ಸಮಾನತೆಯ ಪಾಠ ಸಾರಲು ಯತ್ನಿಸಿತ್ತು.
ದೇವಸ್ಥಾನದ ಪರಿಸರದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂತ್ರಸ್ತ ಕುಟುಂಬದ ಯುವಕನೊಬ್ಬ ದೇಗುಲ ಪ್ರವೇಶಿಸಿದ್ದ. ತನ್ನ ಕುಟುಂಬ ಯಾವುದೇ ತಪ್ಪು ಮಾಡಿಲ್ಲ, ಮತ್ತೆ ತಾವ್ಯಾಕೆ ದೇಗುಲದಿಂದ ಹೊರಗಿರಬೇಕು ಎನ್ನುವುದು ಆತನ ವಾದವಾಗಿತ್ತು. ಆತನ ದೇಗುಲ ಪ್ರವೇಶ ಆ ಗುಂಪಿಗೆ ಇಷ್ಟವಾಗಲಿಲ್ಲ.
ರಜಪೂರ್ ಸಮುದಾಯದ ಯುವಕ ದೇಗುಲ ಪ್ರವೇಶಿಸಿದ್ದನ್ನು ವಿರೋಧಿಸಿದ ಗುಂಪು ಆತನ ಮನೆ ಮೇಲೆ ದಾಳಿ ನಡೆಸಿತು. ಕಬ್ಬಣದ ರಾಡ್, ದೊಣ್ಣೆ ಹಿಡಿದು ಆತನ ಮನೆಯವರನ್ನು ಆ ಗುಂಪು ಥಳಿಸಿತು. ಅದರಲ್ಲೂ ಮಹಿಳೆಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿತು. ದೂರು ಕೊಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆಯನ್ನೂ ಒಡ್ಡಿತು.
ಕಾಂತ ಪ್ರೇಮ್ ರಜಪೂತ್, ಗೀತಾ ರಜಪೂತ್ ಮತ್ತು ಅಂಜಲಿ ಕೇಂದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಇದರಿಂದ ಮತ್ತಷ್ಟು ಕೆರಳಿದ ಬಹಿಷ್ಕಾರ ವಿಧಿಸಿದ ಗುಂಪು ಈ ಮಹಿಳೆಯರನ್ನು ರಸ್ತೆಗೆ ಎಳೆದು ಬಟ್ಟೆಯನ್ನು ಹರಿದು ಹಾಕಿ, ಅವರನ್ನು ಅರೆನಗ್ನರನ್ನಾಗಿ ಮಾಡಿದ್ದಲ್ಲೆ ಕೂದಲನ್ನು ಕತ್ತರಿಸಿ ಕ್ರೌರ್ಯ ಮೆರೆಯಿತು. ಬಳಿಕ ಅವರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಸುಮಾರು 2 ಕಿ.ಮೀ.ನಷ್ಟು ಮೆರವಣಿಗೆ ನಡೆಸಿತು. ಅಲ್ಲದೆ ಬಲವಂತವಾಗಿ ಹಲವರ ಪಾದ ಸ್ಪರ್ಶಿಸುವಂತೆಯೂ ಮಾಡಲಾಯಿತು.
ವೈರಲ್ ಆಗಿರುವ ವಿಡಿಯೊದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದರೂ ನೆರೆದವರು ಸಹಾಯಕ್ಕೆ ಧಾವಿಸದೆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರುವುದು ಕಂಡು ಬಂದಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮುಖ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣದ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.