newsics.com/ನ್ಯೂಸಿಕ್ಸ್
ಲಕ್ನೋ: ಕೇವಲ ನೀರು ತರಲು ನಿರಾಕರಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಕಾಸ್ಗಂಜ್ ಜಿಲ್ಲೆಯ ಸಹವರ್ ಪೊಲೀಸ್ ಠಾಣೆ ವ್ಯಾಪ್ತಿಯ ಯಾಕುತ್‌ಗಂಜ್ ಗ್ರಾಮದಲ್ಲಿ ಕಳೆದ ಶುಕ್ರವಾರದಂದು ನಾಮಕರಣ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಸಂಬಂಧಿಕರು ಮತ್ತು ಗ್ರಾಮಸ್ಥರು ಸೇರಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಾಲಕನ ತಂದೆಯ ಸಂಬಂಧಿಯಾದ ಧನೇಶ್ ಯಾದವ್ ಎಂಬಾತ ಮದ್ಯ ಸೇವಿಸುತ್ತಾ ಕುಳಿತಿದ್ದ.
ಮದ್ಯದ ಅಮಲಿನಲ್ಲಿ ಸಾರಾಯಿ ಕುಡಿಯುತ್ತಿದ್ದ ಧನೇಶ್, ಮದ್ಯಕ್ಕೆ ಬೆರೆಸಲು ನೀರು ತರುವಂತೆ ಅಲ್ಲಿಯೇ ಇದ್ದ ಒಂಬತ್ತು ವರ್ಷದ ಬಾಲಕನಿಗೆ ಹೇಳಿದ್ದಾನೆ. ಆದರೆ ಬಾಲಕ ನೀರು ತರಲು ನಿರಾಕರಿಸಿದಾಗ, ಕೋಪಗೊಂಡ ಧನೇಶ್ ತನ್ನ ಬಳಿಯಿದ್ದ ಬಂದೂಕಿನಿಂದ ಮಗುವಿನ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಕಾಸ್ಗಂಜ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಯ ವೇಳೆ ಶನಿವಾರ ಬಾಲಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಆರೋಪಿ ಧನೇಶ್ ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಲಾದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಣ್ಣ ಕಾರಣಕ್ಕಾಗಿ ಮದ್ಯದ ಅಮಲಿನಲ್ಲಿ ನಡೆದ ಈ ಕೊಲೆ ಪ್ರಕರಣವು ಇಡೀ ಗ್ರಾಮವನ್ನೇ ಆಘಾತಕ್ಕೀಡು ಮಾಡಿದೆ.
https://www.newsics.com/2026/05/03/ac-explosion-causes-massive-fire-disaster-9-dead-many-injured/