ದಾವಣಗೆರೆ ದಂಗಲ್ ತೀವ್ರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರಸ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಕೆಲವು ದಿನಗಳಿಂದ ಬಿಡುವಿಲ್ಲದ ರಾಜಕೀಯ ಚಟುವಟಿಕೆ ನಡೆಯುತ್ತಿವೆ.
ಬೈ ಎಲೆಕ್ಷನ್ ವೇಳೆ ಪಕ್ಷ ವಿರೋಧ ಚಟುವಟಿಕೆ ಆರೋಪದ ಮೇಲೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಸಂಕಷ್ಟ ಎದುರಾಗಿದ್ದು, ಹೈಕಮಾಂಡ್ ಕ್ರಮದ ಬಗ್ಗೆ ಚಿಂತನೆ ನಡೆಸಿದೆ. ಇದರ ಮಧ್ಯೆ ಇದೀಗ ಜಮೀರ್ ಅಹ್ಮದ್ ಖಾನ್ ಆಪ್ತೆ, ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಅಫ್ರಿನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ವಿಚಾರದಲ್ಲಿ ಸಣ್ಣಪುಟ್ಟ ನಾಯಕರ ತಪ್ಪನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಕೆಪಿಸಿಸಿ, ಪಕ್ಷ ವಿರೋಧಿ, ಅಶಿಸ್ತು ರೀತಿ ನಡೆದುಕೊಳ್ಳುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಅದರಂತೆ ತೆ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತೆ ಅಫ್ರಿನ್ ಖಾನ್ ಅವರನ್ನ ಸಹ ಕಾಂಗ್ರೆಸ್ನಿಂದ ಉಚ್ಛಾಟನೆ ಮಾಡಲಾಗಿದೆ.
ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಅಫ್ರಿನ್ ಖಾನ್ ಅವಹೇಳನಕಾರಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಲ್ಲದೆ ರಿಜ್ವಾನ್ ಅರ್ಷದ್ ಅವರನ್ನು ‘ಮೀರ್ ಸಾದಿಕ್’ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದು ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅಫ್ರಿನ್ ಖಾನ್ ತಲೆದಂಡವಾಗಿದೆ.
ಮೂರ್ಖತನದ ನಿರ್ಧಾರ ಎಂದ ಅಫ್ರಿನ್ ಖಾನ್
ಇನ್ನು ಪಕ್ಷದಿಂದ ಉಚ್ಚಾಟನೆ ಆದೇಶಕ್ಕೆ ಪ್ರತಿಕ್ರಿಯಿಸಿದ ಅಫ್ರಿನ್ ಖಾನ್ ಪಕ್ಷದ ವಿರುದ್ಧ ಸಿಡಿದೆದ್ದಾರೆ. ʼʼನಾನು ಏಪ್ರಿಲ್ 4ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಆದರೆ ಇಂದು ನನ್ನನ್ನು ಹೊರಹಾಕಲಾಗಿದೆ. ಇದು ಮೂರ್ಖತನದ ನಿರ್ಧಾರʼʼ ಎಂದು ಲೇವಡಿ ಮಾಡಿದ್ದಾರೆ.