newsics.com
ಅಮೆರಿಕ ಮತ್ತು ಇರಾನ್ ನಡುವೆ ಸಂಧಾನವಾಗಿ ಯುದ್ಧ ನಿಲ್ಲುತ್ತೆ, ಜಗತ್ತು ಶಾಂತಿಯಾಗುತ್ತೆ ಎನ್ನುವಾಗಲೇ ಟ್ರಂಪ್ ಆಡಳಿತವು ಇರಾನ್ ನೌಕಾಪಡೆಯ ಶಕ್ತಿಯನ್ನು ಬಹುತೇಕ ನಾಶಪಡಿಸಿರುವುದಾಗಿ ಘೋಷಿಸಿದೆ.
ಹೋರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ ಆರಂಭಿಸಿರುವ ಅಮೆರಿಕ, ಇರಾನ್ನ ಸಣ್ಣ ಬೋಟ್ಗಳಿಗೂ ಸಾವಿನ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಸೋಮವಾರ ಸಂಜೆ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಸ್ಫೋಟಕ ಪೋಸ್ಟ್ ಹಾಕಿರುವ ಡೊನಾಲ್ಡ್ ಟ್ರಂಪ್, ಇರಾನ್ನ ನೌಕಾ ಶಕ್ತಿಯನ್ನು ಬಹುತೇಕ ನಿರ್ನಾಮ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇರಾನ್ನ 158 ಬೃಹತ್ ಯುದ್ಧ ನೌಕೆಗಳು ಈಗ ಸಮುದ್ರದ ತಳದಲ್ಲಿ ಬಿದ್ದಿವೆ. ನಮ್ಮ ಸೈನ್ಯವು ಅವುಗಳನ್ನು ಸದೆಬಡಿದಿದೆ ಎಂದು ಬರೆದುಕೊಂಡಿದ್ದಾರೆ. ಇರಾನ್ನ ಕೆಲವು ಸಣ್ಣ ಫಾಸ್ಟ್ ಅಟ್ಯಾಕ್ ಬೋಟ್ಗಳು ಇನ್ನೂ ಉಳಿದಿರಬಹುದು, ಆದರೆ ಅವು ದಿಗ್ಬಂಧನದ ಹತ್ತಿರ ಬಂದರೆ ಕ್ಷಣಾರ್ಧದಲ್ಲಿ ನಾಶಪಡಿಸಲಾಗುವುದು ಎಂದು ಟ್ರಂಪ್ ಗುಡುಗಿದ್ದಾರೆ.
ಟ್ರಂಪ್ ಈ ಮಿಲಿಟರಿ ಕಾರ್ಯಾಚರಣೆಯನ್ನು ಅಮೆರಿಕದ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟಕ್ಕೆ ಹೋಲಿಸಿದ್ದಾರೆ. ನಾವು ಅಮೆರಿಕಕ್ಕೆ ಸಮುದ್ರ ಮಾರ್ಗದ ಮೂಲಕ ಬರುವ ಮಾದಕ ದ್ರವ್ಯಗಳನ್ನು ತಡೆಯಲು ಯಾವ ಸಿಸ್ಟಮ್ ಆಫ್ ಕಿಲ್ ಬಳಸುತ್ತೇವೆಯೋ, ಅದೇ ವ್ಯವಸ್ಥೆಯನ್ನು ಇರಾನ್ ಹಡಗುಗಳ ವಿರುದ್ಧವೂ ಬಳಸುತ್ತಿದ್ದೇವೆ. ಈಗಾಗಲೇ ಸಮುದ್ರ ಮಾರ್ಗದಲ್ಲಿ ಬರುವ ಹೆಚ್ಚಿನ ನಾರ್ಕೋಟಿಕ್ಸ್ ಅನ್ನು ನಾವು ತಡೆದಿದ್ದೇವೆ, ಅದೇ ರೀತಿ ಇರಾನ್ ಹಡಗುಗಳನ್ನು ತಡೆಯುತ್ತೇವೆ ಎಂದು ವಿವರಿಸಿದ್ದಾರೆ.