https://youtube.com/shorts/1G3iDuCfqaQ?si=Tja2ncvA4iaSoDUf
newsics.com
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸೈಬರ್ ವಂಚಕರು ಮನಬಂದಂತೆ ಹಣ ದೋಚುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಸೈಬರ್ ವಂಚಕರು 94 ವರ್ಷದ ನಿವೃತ್ತ ಸಂಶೋಧಕರೊಬ್ಬರಿಗೆ ಬರೋಬ್ಬರಿ 5 ಕೋಟಿ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಿವೃತ್ತ ಸಂಶೋಧಕರಿಗೆ ಅಪರಿಚಿತ ವ್ಯಕ್ತಿಯೊಬ್ಬ ಲ್ಯಾಂಡ್ ಲೈನ್‌ಗೆ ಕರೆ ಮಾಡಿ, ನಿಮ್ಮ ವಿರುದ್ಧ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಾಗಿದೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ. ನಂತರ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿ ‘ಸಂದೀಪ್ ರಾವ್’ ಎಂಬ ಹೆಸರಿನಲ್ಲಿ ಕರೆ ಮಾಡಿ, ಆಧಾರ್ ಕಾರ್ಡ್ ವಿವರಗಳನ್ನು ವಾಟ್ಸಪ್ ಮೂಲಕ ಪಡೆದಿದ್ದಾನೆ. ಬಳಿಕ ನಕಲಿ ಎಫ್‌ಐಆರ್ ಕಳುಹಿಸಿ, ಸಿಬಿಐ ಅಧಿಕಾರಿಗಳಂತೆ ವೇಷ ಹಾಕಿಕೊಂಡು ವಿಡಿಯೋ ಕಾಲ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ವೃದ್ಧ ಆರೋಪಿಸಿದ್ದಾರೆ.
ಕೇಸ್ ಕೈ ಬಿಡಲು ಹಣ ನೀಡಬೇಕು ಎಂದು ಒತ್ತಾಯಿಸಿದ ಆರೋಪಿಗಳು, ಜನವರಿ 17ರಿಂದ ಫೆಬ್ರವರಿ 23ರವರೆಗೆ ಹಂತ ಹಂತವಾಗಿ ಒಟ್ಟು 4.91 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಇನ್ನಷ್ಟು ಹಣ ಕೇಳಿದಾಗ ಅನುಮಾನಗೊಂಡ ವೃದ್ಧ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.