newsics.com
ಬಹುನಿರೀಕ್ಷಿತ ಧುರಂಧರ್ 2 ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರಾಸೆ ಮೂಡಿಸಿರುವ ಬೆನ್ನಲ್ಲೇ, ನಟಿ ರಮ್ಯಾ ಅವರು ಚಿತ್ರದ ಬಗ್ಗೆ ಬರೆದಿರುವ ಟೂ-ಪೇಜ್ ವಿಮರ್ಶೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.
ಮೊದಲ ಭಾಗದಲ್ಲಿ ಅದ್ಭುತ ಯಶಸ್ಸು ಕಂಡಿದ್ದ ಈ ಸಿನಿಮಾ, ಎರಡನೇ ಭಾಗದಲ್ಲಿ ಅತಿರೇಕದ ಹಿಂಸೆ, ತರ್ಕಹೀನ ದೃಶ್ಯಗಳು ಮತ್ತು ನೀರಸ ನಿರೂಪಣೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದೆ.
ವಿಶೇಷವಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಈ ಚಿತ್ರದ ಬಗ್ಗೆ ನೀಡಿರುವ ಎರಡು ಪುಟಗಳ ಸುದೀರ್ಘ ವಿಮರ್ಶೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. ಥಿಯೇಟರ್‌ಗೆ ಹೋಗಿ ಹಣ ವ್ಯರ್ಥ ಮಾಡಬೇಡಿ, ಇದು ಕೇವಲ ಒಟಿಟಿಯಲ್ಲಿ ನೋಡುವಂತಹ ಸ್ಕ್ರಾಲಿಂಗ್ ಕಂಟೆಂಟ್ ಎಂದು ರಮ್ಯಾ ನೇರವಾಗಿಯೇ ಕಿಡಿಕಾರಿದ್ದಾರೆ.
ಇದೊಂದು ಸಿನಿಮಾ ಅಲ್ಲ, ಪ್ರೇಕ್ಷಕರ ಸಹನೆಗೆ ಒಡ್ಡಿದ ಪರೀಕ್ಷೆ ಎಂದು ಕಿಡಿಕಾರುವ ಮೂಲಕ ಚಿತ್ರದ ಕಳಪೆ ಗುಣಮಟ್ಟವನ್ನು ರಮ್ಯಾ ಅಕ್ಷರಶಃ ಬಯಲು ಮಾಡಿದ್ದಾರೆ. ರಣವೀರ್ ಸಿಂಗ್ ನಟನೆಗಿಂತ ಅವರ ಕೂದಲೇ ಸಿನಿಮಾದಲ್ಲಿ ಅತಿ ದೊಡ್ಡ ಪಾತ್ರ ವಹಿಸಿದೆ ಎಂದು ವ್ಯಂಗ್ಯವಾಡಿರುವ ಅವರು, ಅತಿಯಾದ ಹಿಂಸೆ ಮತ್ತು ತರ್ಕಹೀನ ದೃಶ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲುಗಳು ತುಂಡಾಗಿ, ಮೈಮೇಲೆ ಸೀಮೆಎಣ್ಣೆ ಸುರಿದಿದ್ದರೂ ನಟರು ಟೆಡ್-ಟಾಕ್ ನೀಡುವಂತೆ ಸುದೀರ್ಘ ಡೈಲಾಗ್ ಹೊಡೆಯುತ್ತಾರೆ! ವೈದ್ಯಕೀಯ ವಿಜ್ಞಾನಕ್ಕೆ ಇಲ್ಲಿ ಬೆಲೆಯೇ ಇಲ್ಲ. ಇದಕ್ಕಾಗಿ ಆಸ್ಕರ್ ಅಲ್ಲ, ನೋಬೆಲ್ ಪ್ರಶಸ್ತಿಯೇ ನೀಡಬೇಕು ಎಂದು ನಟಿ ರಮ್ಯಾ ತಮಾಷೆ ಮಾಡಿದ್ದಾರೆ.