newsics.com
ಕೋಲಾರ: ಲಂಚ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಕಾರಿನಲ್ಲಿ ಪರಾರಿಯಾಗುತ್ತಿದ್ದ ಕೋಲಾರ ಸಹಾಯಕ ಔಷಧ ನಿಯಂತ್ರಕಿಯ ಕಾರನ್ನು ಲೋಕಾಯುಕ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಅವರನ್ನು ಬಂಧಿಸಿದ್ದಾರೆ.
ಔಷಧ ಅಂಗಡಿ ಸ್ಥಳಾಂತರಕ್ಕೆ ಪರವಾನಗಿ ನೀಡಲು ಕೋಲಾರ ಸಹಾಯಕ ಔಷಧ ನಿಯಂತ್ರಕಿ ಜೆ.ಶ್ಯಾಮಲಾ ₹35 ಸಾವಿರ ಲಂಚ ಪಡೆಯುವಾಗ ಈ ನಾಟಕೀಯ ಘಟನೆ ನಡೆದಿದೆ.
ಔಷಧ ಅಂಗಡಿ ಬೇರೆಡೆಗೆ ಸ್ಥಳಾಂತರಕ್ಕೆ ಪರವಾನಗಿ ನೀಡಲು ಅಧಿಕಾರಿ ₹35 ಸಾವಿರ ಲಂಚ ಕೇಳುತ್ತಿದ್ದಾರೆ ಎಂದು ಟೇಕಲ್‌ನ ಅಂಗಡಿ ಮಾಲೀಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಟೇಕಲ್‌ನಲ್ಲಿ ಮಂಗಳವಾರ ಕಾರಿನಲ್ಲಿಯೇ ಅಧಿಕಾರಿ ಲಂಚದ ಹಣ ಪಡೆಯುವಾಗ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಆಯಂಟೊನಿ ಜಾನ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ತಕ್ಷಣ ಮಹಿಳಾ ಅಧಿಕಾರಿಯು ಸಹಾಯಕ ಔಷಧ ನಿಯಂತ್ರಕರ ಕಚೇರಿಯ ’ಡಿ’ ಗ್ರೂಪ್ ನಿವೃತ್ತ ನೌಕರ ಶ್ರೀನಿವಾಸ್ ಮತ್ತು ಚಾಲಕನೊಂದಿಗೆ ಕಾರಿನಲ್ಲಿ ಪರಾರಿಯಾದರು.
ಬಂಗಾರಪೇಟೆ ಕಡೆ ವೇಗವಾಗಿ ಹೊರಟ ಕಾರನ್ನು ಲೋಕಾಯುಕ್ತ ಪೊಲೀಸರು ಬೆನ್ನಟ್ಟಿದ್ದಾರೆ. ಸುಮಾರು 15 ಕಿ.ಮೀ. ದೂರ ಬೆನ್ನತ್ತಿದ ನಂತರ ಆರೋಪಿಗಳ ಕಾರಿಗೆ ತಮ್ಮ ಕಾರನ್ನು ಅಡ್ಡ ನಿಲ್ಲಿಸಿ ಹಿಡಿದಿದ್ದಾರೆ.
ಜೆ.ಶ್ಯಾಮಲಾ, ಶ್ರೀನಿವಾಸ್ ಮತ್ತು ಶ್ಯಾಮಲಾ ಅವರ ಕಾರಿನ ಚಾಲಕ ಮಹಾಂತೇಶ್ ಅವರನ್ನು ಮಂಗಳವಾರ ರಾತ್ರಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Gold, Silver ಚಿನ್ನ, ಬೆಳ್ಳಿ ಮತ್ತಷ್ಟು ಅಗ್ಗ, ಆಭರಣಪ್ರಿಯರಿಗೆ ಖುಷಿಯೋ ಖುಷಿ
War News ಯುದ್ಧ ಮುಂದುವರಿಕೆ ತಂತ್ರದಿಂದಲೇ ಗೆಲ್ಲುತ್ತಿದೆಯಾ ಇರಾನ್? ಟ್ರಂಪ್ ಆತಂಕಗೊಂಡಿದ್ದೇಕೆ?
Election news ಉಪ ಚುನಾವಣೆ: ಹಬ್ಬದಂದೇ ಬಾಗಲಕೋಟೆ, ದಾವಣಗೆರೆ ಬಿಜೆಪಿ ಅಭ್ಯರ್ಥಿ ಘೋಷಣೆ