newsics.com
ಬೆಂಗಳೂರು: ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ ಎಂಬಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಾಲುಗಳನ್ನು ಉಲ್ಲೇಖಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಜಲಸಂಪನ್ಮೂಲ ಹಾಗೂ ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ ಕೊಡುಗೆಗಳನ್ನು ಘೋಷಿಸಿದ್ದಾರೆ.
ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ, ತಮಿಳುನಾಡು ರಾಜ್ಯವು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿಗಳು ವಜಾಗೊಂಡಿರುವುದು ಕರ್ನಾಟಕಕ್ಕೆ ಮಹತ್ವದ ಕಾನೂನು ಜಯವಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ, ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರವೇ ಸಿದ್ಧಪಡಿಸಿ ಅನುಮೋದನೆಗೆ ಹಾಗೂ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಏತ ನೀರಾವರಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. 2ನೇ ಹಂತದಲ್ಲಿ ಬಾಕಿ ಇರುವ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಹೆಚ್ಚುವರಿಯಾಗಿ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಲು ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿ ಸಮೀಪ 1.2 ಟಿ.ಎಂ.ಸಿ ಸಾಮರ್ಥ್ಯದ ಸಮತೋಲನಾ ಜಲಾಶಯವನ್ನು ನಿರ್ಮಿಸಲಾಗುವುದು.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಒದಗಿಸುವ ಬಗ್ಗೆ ಕೇಂದ್ರ ಸರ್ಕಾರದ 2023-24ರ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದರೂ ಸಹ ಇಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಆದರೂ, ರಾಜ್ಯ ಸರ್ಕಾರದ ವತಿಯಿಂದ ಈ ಯೋಜನೆಗೆ
11,343 ಕೋಟಿ ರೂ.ಗಳ ವೆಚ್ಚ ಭರಿಸಲಾಗಿದೆ. ಸುಮಾರು ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಗ್ರಾಮದ ಭೂಸಮಸ್ಯೆಯನ್ನು ಬಗೆಹರಿಸಲಾಗಿದೆ. ಇದರಿಂದಾಗಿ 135 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ಇದರಡಿ ಬರುವ ಫೀಡರ್ ಕಾಮಗಾರಿಗಳನ್ನು2027ನೇ ಸಾಲಿನಲ್ಲಿ ಪೂರ್ಣಗೊಳಿಸಿ 157 ಕೆರೆಗಳನ್ನು ತುಂಬಿಸಲಾಗುವುದು.