newsics.com
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಬಜೆಟ್ ಅನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ಇದು ಅವರು ಮಂಡಿಸುತ್ತಿರುವ ದಾಖಲೆಯ 17ನೇ ಆಯವ್ಯಯವಾಗಿದ್ದು, ಈ ಬಾರಿಯ ಒಟ್ಟು ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂ.ಗಳಾಗಿದೆ. ಕೃಷಿ, ಉದ್ಯೋಗ, ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಭರ್ಜರಿ ಕೊಡುಗೆ ನೀಡಿರುವ ಈ ಬಜೆಟ್‌ನಲ್ಲಿ, ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ (Social Media) ಬಳಸುವಂತಿಲ್ಲ ಎಂಬ ಅತ್ಯಂತ ಮಹತ್ವದ ಹಾಗೂ ದಿಟ್ಟ ಘೋಷಣೆಯನ್ನು ಸಿಎಂ ಮಾಡಿದ್ದಾರೆ.
ಸಂತ ಶಿಶುನಾಳ ಶರೀಫರ ವಸತಿ ಶಾಲೆ: ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ 10 ಹೊಸ ‘ಸಂತ ಶಿಶುನಾಳ ಶರೀಫರ ವಸತಿ ಶಾಲೆ’ಗಳನ್ನು CBSE ಪಠ್ಯಕ್ರಮದಡಿ ಆರಂಭಿಸಲಾಗುವುದು. 2026-27ನೇ ಸಾಲಿನಲ್ಲಿ ಈ ಮಾದರಿಯ ಇನ್ನೂ 25 ಹೊಸ ಶಾಲೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ.
ಮೌಲಾನಾ ಆಜಾದ್ ಶಾಲೆಗಳ ಮೇಲ್ದರ್ಜೆ: ಕಳೆದ ವರ್ಷದ ಯೋಜನೆಯ ಮುಂದುವರಿದ ಭಾಗವಾಗಿ, ಈ ವರ್ಷ 400 ಕೋಟಿ ರೂ. ವೆಚ್ಚದಲ್ಲಿ 100 ಮೌಲಾನಾ ಆಜಾದ್ ಮತ್ತು ಉರ್ದು ಶಾಲೆಗಳನ್ನು ಕೆ.ಪಿ.ಎಸ್ (KPS) ಮಾದರಿಗೆ ಉನ್ನತೀಕರಿಸಲಾಗುವುದು.
ಹೊಸ ವಿಭಾಗಗಳ ಆರಂಭ: ಪ್ರಸ್ತುತವಿರುವ 25 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಹಾಗೂ 18 ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗವನ್ನು ಹೊಸದಾಗಿ ಆರಂಭಿಸಲಾಗುವುದು.
ವಕ್ಫ್ ಶಿಕ್ಷಣ ಸಂಸ್ಥೆಗಳಿಗೆ ಬಲ: ವಕ್ಫ್ ಸಂಸ್ಥೆಗಳ ಅಡಿಯಲ್ಲಿರುವ 31 ಮಹಿಳಾ ಪದವಿಪೂರ್ವ (PUC) ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಸವಣೂರಿನಲ್ಲಿ ಹೊಸ ಮಹಿಳಾ ಪಿಯು ಕಾಲೇಜು ಆರಂಭವಾಗಲಿದೆ.