https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಇತ್ತೀಚೆಗೆ ತರಕಾರಿಯನ್ನ ಕೂಡ ಆರೋಗ್ಯಕರ ಪದಾರ್ಥ ಎಂದು ಪರಿಗಣಿಸೋಕೆ ಆಗಲ್ಲ. ಯಾಕಂದ್ರೆ ಕಾಲ ಬದಲಾಗಿದೆ. ತಿನ್ನೋ ವಸ್ತು ಇಂದ ಹಿಡಿದು ಎಲ್ಲವೂ ಕೆಮಿಕಲ್ ಮಯವಾಗಿದೆ. ಹೀಗಿರೋವಾಗ ತರಕಾರಿ ಮಾತ್ರ ಆರೋಗ್ಯಕರ, ಡಯಟ್‌ಗೆ ಉಪಯುಕ್ತ, ತರಕಾರಿ ತಿನ್ನೋದ್ರಿಂದ ಲೈಫ್‌ಸ್ಟೈಲ್ ಚೆನ್ನಾಗಿರುತ್ತೆ ಅಂದುಕೊಳ್ಳೋಕಾಗಲ್ಲ. ಅದರಲ್ಲೂ ಈಗ ಆಗಿರೋ ಬೆಳವಣಿಗೆಯಿಂದ ತರಕಾರಿ ತಿನ್ನೋದಕ್ಕೂ ಹೆದರೋ ಪರಿಸ್ಥಿತಿ ಬಂದಿದೆ.
ಇದೀಗ ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಪಾಯಕಾರಿ ಭಾರಿ ಲೋಹವಾಗಿರುವ ಸೀಸದ ಅಂಶ ಮತ್ತು ಕ್ರಿಮಿನಾಶಕಗಳ ಅವಶೇಷಗಳು ಕಂಡು ಬಂದಿದ್ದು, ಇವುಗಳನ್ನು ಸೇವಿಸಿದರೆ ಕಿಡ್ನಿ ಹಾಗೂ ಮಿದುಳು ಕಾಯಿಲೆ ಬರಲಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ನಗರದ ಅನೇಕ ತರಕಾರಿಗಳಲ್ಲಿ ಅಪಾಯಕಾರಿ ಅಂಶಗಳಿರುವ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಎನ್‌ಜಿಟಿ ನಿರ್ದೇಶನದಂತೆ ತರಕಾರಿಗಳ ಪರೀಕ್ಷೆ ನಡೆಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು.
ಈ ಸಮಿತಿಯ ಸದಸ್ಯರು ಬೆಂಗಳೂರು ನಗರ, ನೆಲಮಂಗಲ, ಚಿಕ್ಕಬಳ್ಳಾಪುರದ ವಿವಿಧ ಎಪಿಎಂಸಿಗಳು, ಹಾಪ್‌ಕಾಮ್ಸ್‌ಗಳು, ತರಕಾರಿ ಬೆಳೆಯುವ ಪ್ರದೇಶಗಳಿಂದ 72 ಮಾದರಿಯ ತರಕಾರಿಗಳನ್ನು ಸಂಗ್ರಹಿಸಿದ್ದರು. ಪರೀಕ್ಷೆಯ ಭಾಗವಾಗಿ ಹೊಲಗಳಲ್ಲಿನ ಮಣ್ಣು ಮತ್ತು ಬೆಳೆಗಳಿಗೆ ಬಳಸುವ ಸಂಸ್ಕರಿಸಿದ ನೀರು, ಅಂತರ್ಜಲ ಕೂಡ ಸಂಗ್ರಹಿಸಿ ಎಫ್‌ಎಸ್‌ಎಸ್‌ಎಐ ಅನುಮೋದಿತ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ.
ಅಧ್ಯಯನಕ್ಕೋಸ್ಕರ ಈ ಸಮಿತಿ ಒಟ್ಟು 72 ತರಕಾರಿಗಳ ಮಾದರಿಗಳನ್ನು ಮಾರುಕಟ್ಟೆ ಮತ್ತು ಕೃಷಿ ಕ್ಷೇತ್ರಗಳಿಂದ ಸಂಗ್ರಹಿಸಿತು. ಈಗ ಪರೀಕ್ಷಾ ಫಲಿತಾಂಶಗಳಲ್ಲಿ 19 ಮಾದರಿಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಸೀಸ ಕಂಡುಬಂದಿದೆ.
ಸಾವಯವ ತರಕಾರಿ ಎಂದು ಮಾರಾಟ ಮಾಡಲಾಗುತ್ತಿದ್ದ 1 ಕೆ.ಜಿ ಬದನೆಕಾಯಿಯಲ್ಲಿ 1.953 ಎಂ.ಜಿ ಸೀಸ ಕಂಡು ಬಂದಿದೆ. ಇದು ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದ್ದಕ್ಕಿಂತ 20 ಪಟ್ಟು ಅಧಿಕ. ತೊಂಡೆಕಾಯಿಯಲ್ಲಿ 18 ಪಟ್ಟು, ಬೀನ್ಸ್‌ನಲ್ಲಿ 9 ಪಟ್ಟು ಸೀಸ ಕಂಡು ಬಂದಿದೆ. ಹಸಿರೆಲೆಗಳು ಹಾಗೂ ಕ್ಯಾಬೇಜ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ 5 ಪಟ್ಟು ಹೆಚ್ಚು ಸೀಸ, ಸೌತೆಕಾಯಿ, ದಪ್ಪ ಮೆಣಸಿನಕಾಯಿ, ಹಾಗಲಕಾಯಿ, ಬೀಟ್‌ರೂಟ್, ಬಜ್ಜಿ ಮೆಣಸಿನಕಾಯಿಯಲ್ಲೂ ಕೂಡ ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸೀಸದ ಅಂಶ ಕಂಡು ಬಂದಿದೆ.
ತರಕಾರಿಗಳಲ್ಲಿ ಕಂಡು ಬಂದಿರುವ ಸೀಸ ಮತ್ತು ಕ್ರಿಮಿನಾಶಕ ಅವಶೇಷಗಳ ಕುರಿತು ಎಚ್ಚರಿಕೆ ವಹಿಸಬೇಕು. ನಿಯಮಿತವಾಗಿ ತರಕಾರಿಗಳ ಪರೀಕ್ಷೆ ಮಾಡುತ್ತಿರಬೇಕು. ಅಪಾಯಕಾರಿ ಅಂಶಗಳು ತರಕಾರಿಗಳಲ್ಲಿ ಸೇರ್ಪಡೆಗೊಳ್ಳದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.