newsics.com
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ಬಾಂಗ್ಲಾದೇಶದ ಹಂಗಾಮಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ. ಬಾಂಗ್ಲಾದೇಶದಲ್ಲಿ ಇದೀಗ ಮೀಸಲು ವಿವಾದ ಭುಗಿಲೆದ್ದಿದ್ದು, ಹಿಂಸಾಚಾರದ ಹಿನ್ನೆಲೆಯಲ್ಲಿ 5 ಬಾರಿಯ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ.
ಈ ಮೊದಲು ಹಸೀನಾ ಯಾರನ್ನು ರಕ್ತದಾಹಿ ಎಂದು ಕರೆದಿದ್ದರೋ ಅದೇ ಯೂನಸ್ ಗೆ ಬಾಂಗ್ಲಾ ಸಾರಥ್ಯ ನೀಡಬೇಕೆಂಬ ಕೂಗು ಕೇಳಿಬಂದಿದೆ. ಮೊಹಮ್ಮದ್ ಯೂನುಸ್ ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಸಣ್ಣ ಉದ್ಯಮಗಳಿಗೆ ಬೆಂಬಲ ನೀಡಿ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದವರು.
ಬಾಂಗ್ಲಾದೇಶದ ಮೀಸಲು ನಿಯಮವನ್ನು ವಿರೋಧಿಸಿ ಮತ್ತು ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆ ಮುಂದುವರಿದಿದ್ದು, 56 ಜನರು ಮೃತಪಟ್ಟಿದ್ದಾರೆ. ಇದರಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ.
ಇದೇ ಪ್ರತಿಭಟನೆಯ ನಾಯಕರು ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಮೊಹಮದ್ ಯೂನಸ್ ಅವರಿಗೆ ಮನವಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಯೂನಸ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಯೂನಸ್ ಅವರ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ 2006ರಲ್ಲಿ ನೋಬೆಲ್ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.
ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕಡುಬಡವರಿಗೆ ಬದುಕು ಕಟ್ಟಿಕೊಳ್ಳಲು ಅತ್ಯಂತ ಕಡಿಮೆ ಬಡ್ಡಿ ದರ ಅಥವಾ ಬಡ್ಡಿ ರಹಿತ ಸಾಲ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ನೆರವು ನೀಡುವ ಮೂಲಕ ಬಡವರಲ್ಲಿ ಬಡವರ ಪಾಲಿಗೆ ಬ್ಯಾಂಕರ್ ಎಂದೇ 84 ವರ್ಷದ ಯೂನಸ್ ಖ್ಯಾತಿ ಪಡೆದಿದ್ದಾರೆ.