https://youtube.com/shorts/yWrDals90_k?si=qTyTxtvMLgrsr7gN
Subscribe ನ್ಯೂಸಿಕ್ಸ್ ಕನ್ನಡ
newsics.com
ಲ್ಯಾಂಡ್‌ಲಾರ್ಡ್’ ಸಿನಿಮಾ ಈ ವಾರ ತೆರೆಗೆ ಬಂದಿದೆ. ದುನಿಯಾ ವಿಜಯ್- ರಾಜ್ ಬಿ ಶೆಟ್ಟಿ ಕಾಳಗ ನೋಡಿದವರೆಲ್ಲಾ ಕೊಂಡಾಡುತ್ತಿದ್ದಾರೆ.
ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಲ್ಯಾಂಡ್‌ಲಾರ್ಡ್’ ಚಿತ್ರಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ.
ಕಲಾವಿದರೆಲ್ಲಾ ಪೈಪೋಟಿಗೆ ಬಿದ್ದು ನಟಿಸಿ ಗಮನ ಸೆಳೆದಿದ್ದಾರೆ. ಆದರೆ ಚಿತ್ರಕ್ಕೆ ಸಾಧಾರಣ ಓಪನಿಂಗ್ ಸಿಕ್ಕಿದೆ. ಮೊದಲ ದಿನ ಕಲೆಕ್ಷನ್ ಕೂಡ ಬಹಳ ಡಲ್ ಆಗಿತ್ತು. ಬುಕ್‌ಮೈ ಶೋನಲ್ಲಿ ಮೊದಲ ದಿನ 6 ಸಾವಿರ ಟಿಕೆಟ್ ಮಾತ್ರ ಬುಕ್ ಆಗಿತ್ತು.
ಲ್ಯಾಂಡ್‌ಲಾರ್ಡ್’ ಸಿನಿಮಾ ನಿಜಕ್ಕೂ ಬಹಳ ಸತ್ವ ಇರುವ ಸಿನಿಮಾ. ಜಮೀನ್ದಾರಿಕೆ, ಜೀತದಾಳು ಪದ್ಧತಿಯ ಕ್ರೂರ ಇತಿಹಾಸ ಕೆದಕಿರುವ ಸಿನಿಮಾ. ದುನಿಯಾ ವಿಜಯ್ ವೃತ್ತಿ ಜೀವನದಲ್ಲೇ ವಿಶೇಷ ಎನ್ನುವಂತಹ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ದುಷ್ಟ ಜಮೀನ್ದಾರನಾಗಿ ರಾಜ್ ಬಿ ಶೆಟ್ಟಿ ಅಬ್ಬರಿಸಿದ್ದಾರೆ. ಇಬ್ಬರ ಜಿದ್ದಾಜಿದ್ದಿ ನೋಡುಗರಿಗೆ ಇಷ್ಟವಾಗುತ್ತಿದೆ.
ರಚಿತಾ ರಾಮ್, ದುನಿಯಾ ವಿಜಯ್ ಪುತ್ರಿ ರಿತನ್ಯಾ, ಉಮಾಶ್ರೀ, ಶಿಶಿರ್ ಬೈಕಾಡಿ, ಅಚ್ಯುತ್ ಕುಮಾರ್ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಕಲಾವಿದರ ಅಭಿನಯವೇ ಚಿತ್ರದ ಹೈಲೆಟ್. ಇನ್ನು ಸ್ಟಾರ್ ನಟನಾಗಿದ್ದರೂ ವಿಜಯ್ ಚಪ್ಪಲಿ ಹಾರ ಹಾಕಿಕೊಳ್ಳುವುದು, ಮತ್ತೊಂದು ಪಾತ್ರದ ಚಪ್ಪಲಿ ಹಿಡಿದುಕೊಳ್ಳುವ ಸನ್ನಿವೇಶಗಳಲ್ಲಿ ನಟಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
80, 90ರ ದಶಕದಲ್ಲಿ ಇನ್ನು ಜೀವಂತವಾಗಿದ್ದ ದುಷ್ಟ ಜಮೀನ್ದಾರರ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಕೂಲಿ ಕಾರ್ಮಿಕರನ್ನು ಅವರು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಕಣ್ಣಿಗೆ ಕಟ್ಟಿದಂತೆ ಕಟ್ಟಿಕೊಡಲಾಗಿದೆ. ಅಸಹಾಯಕರನ್ನು ಅವರು ತುಳಿಯುತ್ತಿದ್ದನ್ನು ತೆರೆಮೇಲೆ ನೋಡುವವರ ರಕ್ತ ಕುದಿಯುತ್ತದೆ. ಅಷ್ಟರಮಟ್ಟಿಗೆ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಸಣ್ಣಪುಟ್ಟ ತಪ್ಪುಗಳ ಹೊರತಾಗಿಯೂ ಸಿನಿಮಾ ಗೆದ್ದಿದೆ. ಆದರೆ ಇಂತಾದೊಂದು ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್ ಸಿಕ್ಕಿಲ್ಲ. ಸಿನಿಮಾ ಎಲ್ಲಾ ಕಡೆ ಒಳ್ಳೆ ಮಾತುಗಳು ಕೇಳಿಬರ್ತಿದ್ದು ಇನ್ನಾದರೂ ಪ್ರೇಕ್ಷಕರು ಸಿನಿಮಾ ನೋಡುವ ಮನಸ್ಸು ಮಾಡಬೇಕಿದೆ.
ಲ್ಯಾಂಡ್‌ಲಾರ್ಡ್’ ಚಿತ್ರಕ್ಕೆ 2ನೇ ದಿನ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಬುಕ್‌ಮೈ ಶೋನಲ್ಲಿ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಹಾಗಾಗಿ ಮೊದಲ ದಿನಕ್ಕಿಂತ 2ನೇ ದಿನ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗಿಂತ ಚಿತ್ರಮಂದಿರಗಳಲ್ಲೇ ಟಿಕೆಟ್ ಖರೀದಿಸಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಇವತ್ತು ಹಾಗೂ ನಾಳೆ ಪ್ರೇಕ್ಷಕರು ‘ಲ್ಯಾಂಡ್‌ಲಾರ್ಡ್’ ಕೈ ಹಿಡಿಯಬೇಕಿದೆ.