https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ಕೌಟುಂಬಿಕ ಕಲಹ ಹಿನ್ನೆಲೆ ಅಮೆರಿಕಾದ ಜಾರ್ಜಿಯದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಸೇರಿ ಮೂವರು ಸಂಬಂಧಿಕರನ್ನು ಗುಂಡಿಟ್ಟು ಕೊಂದಿರುವ ಘಟನೆ ಜಾರ್ಜಿಯಾದಲ್ಲಿ ನಡೆದಿದೆ.
ಈ ವೇಳೆ ಮನೆಯಲ್ಲಿದ್ದ ಮಕ್ಕಳು ಕಪಾಟಿನಲ್ಲಿ ಅಡಗಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿ 51 ವರ್ಷದ ವಿಜಯ್ ಕುಮಾರ್ ಎಂಬುವರು ತಮ್ಮ ಪತ್ನಿ ಮೀಮು ಡೋಗ್ರಾ(43), ಸಂಬಂಧಿಕರಾದ ಗೌರವ್ ಕುಮಾರ್ (33), ನಿಧಿ ಚಂದರ್ (37) ಹಾಗೂ ಹರೀಶ್ ಚಂದರ್ (38) ಅವರ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದಾರೆ.
ವಿಜಯ್ ಕುಮಾರ್, ತನ್ನ ಪತ್ನಿ ಮೀಮು ಡೋಗ್ರಾ ಮತ್ತು 12 ವರ್ಷದ ಮಗುವಿನೊಂದಿಗೆ ಅಟ್ಲಾಂಟಾದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವೆ ಮನೆಯಲ್ಲಿ ಗಲಾಟೆ ನಡೆದಿದೆ. ಈ ಹಿನ್ನೆಲೆ ಶುಕ್ರವಾರ ಕುಟುಂಬದ ಜೊತೆಗೆ ಕಾರಿನಲ್ಲಿ ಬ್ರೂಕ್ ಐವಿ ಕೋರ್ಟ್‌ನಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದಾರೆ. ಅಲ್ಲಿ ಅವರ ಪತ್ನಿ ಮತ್ತು ಸಂಬಂಧಿಕರೊಂದಿಗೆ ಮತ್ತಷ್ಟು ಜಗಳವಾಗಿದೆ. ಈ ವೇಳೆ ವಿಜಯ್ ಕುಮಾರ್ ತಮ್ಮ ಪತ್ನಿ ಮೀಮು ಮತ್ತು ಸಂಬಂಧಿಕರಾದ ಗೌರವ್ ಕುಮಾರ್, ನಿಧಿ ಚಂದರ್ ಹಾಗೂ ಹರೀಶ್ ಚಂದರ್ ಮೇಲೆ ಗುಂಡು ಹಾರಿಸಿದ್ದಾರೆ.
ಮತ್ತೊಂದೆಡೆ ಮನೆಯಲ್ಲಿದ್ದ ವಿಜಯ್ ಅವರ ಮಗು ಮತ್ತು ಕುಟುಂಬದವರ ಮಕ್ಕಳು ಗುಂಡಿನ ದಾಳಿಯಿಂದ ಭಯಗೊಂಡು ಕಪಾಟಿನಲ್ಲಿ ಅಡಗಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಹಾಗೆಯೇ ವಿಜಯ್ ಅವರ 9 ವರ್ಷದ ಮಗ 911 ಕರೆ ಮಾಡಿ ಪೊಲೀಸರಿಗೆ ಘಟನೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವಿಜಯ್ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟು ನಾಲ್ಕು ದುರುದ್ದೇಶಪೂರ್ವಕ ಕೊಲೆ ಆರೋಪಗಳನ್ನು ಹೊರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಹೇಳಿದೆ.