Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕೊಝಿಕೋಡ್: 42 ವರ್ಷದ ಮಾರ್ಕೆಟಿಂಗ್ ಮ್ಯಾನೆಜರ್ ಯು. ದೀಪಕ್ ಅವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಿಮ್ಜಿತಾ ಮುಸ್ತಫಾಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ವಡಕರಾದಲ್ಲಿನ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಆರೋಪಿಯನ್ನು ದೀರ್ಘಕಾಲದ ಶೋಧ ಕಾರ್ಯಾಚರಣೆ ಬಳಿಕ ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಶಿಮ್ಜಿತಾ ದೇಶ ಬಿಟ್ಟು ಪರಾರಿಯಾಗದಂತೆ ತಡೆಯಲು ಪೊಲೀಸರು ಲುಕ್‌ಔಟ್ ಸರ್ಕ್ಯುಲರ್ ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲೇ ಬಂಧನ ಸಾಧ್ಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 16ರಂದು ಪಯ್ಯನ್ನೂರಿಗೆ ತೆರಳುತ್ತಿದ್ದ ಬಸ್ ಪ್ರಯಾಣದ ವೇಳೆ ನಡೆದ ಘಟನೆಯೇ ಪ್ರಕರಣದ ಮೂಲವಾಗಿದೆ.
35 ವರ್ಷದ ಸಾಮಾಜಿಕ ಜಾಲತಾಣ ಕಂಟೆಂಟ್ ಕ್ರಿಯೇಟರ್ ಹಾಗೂ ಮಾಜಿ ಪಂಚಾಯತ್ ಸದಸ್ಯೆಯಾಗಿರುವ ಶಿಮ್ಜಿತಾ, ದೀಪಕ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ವಿಡಿಯೋ ಚಿತ್ರೀಕರಿಸಿದ್ದರು. ಈ ವಿಡಿಯೋ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ವೈರಲ್ ಆಗಿ, ಲಕ್ಷಾಂತರ ವೀಕ್ಷಣೆ ಪಡೆದಿದ್ದು, ದೀಪಕ್ ವಿರುದ್ಧ ತೀವ್ರ ವಾಗ್ದಾಳಿ ನಡೆದಿತ್ತು.
ಸಾರ್ವಜನಿಕ ಅವಮಾನ ಹಾಗೂ ಮಾನಸಿಕ ಒತ್ತಡದಿಂದ ಕುಗ್ಗಿದ್ದ ದೀಪಕ್ ಅವರು ಜನವರಿ 18ರಂದು ಗೋವಿಂದಪುರಂನ ತಮ್ಮ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಈ ಸಂಬಂಧ ದೀಪಕ್ ಅವರ ತಾಯಿ ಕನ್ಯಾಕ ಅವರು ಪೊಲೀಸರಿಗೆ ದೂರು ಸಲ್ಲಿಸಿ, ಆರೋಪಗಳು ಸಂಪೂರ್ಣ ಸುಳ್ಳಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸುವ ಉದ್ದೇಶದಿಂದಲೇ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದು ದೂರಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಹತ್ಯೆ; ಮೃತದೇಹವನ್ನು ಪೀಸ್ ಮಾಡಿ ಎಸೆದ ದುಷ್ಕರ್ಮಿಗಳು