Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಳಿ ಎಲ್ಲರಿಗೂ ಆಗುತ್ತದೆ. ಚಳಿಗಾಲದಲ್ಲಿ ಮಾತ್ರವಲ್ಲ, ಸೂರ್ಯ ಮುಳುಗಿದ ಮೇಲೆ ವಾತಾವರಣೆ ಸಹಜವಾಗಿಯೇ ತಣ್ಣಗಾಗುತ್ತದೆ. ಇಂತಹ ಸಂದರ್ಭದಲ್ಲಿ ಸಣ್ಣ ಮಟ್ಟದ ಚಳಿ ಕಾಣಿಸಿಕೊಳ್ಳುವುದು ಸಾಮಾನ್ಯ.ಆದರೆ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಚಳಿಯ ಅನುಭವವಾಗುವುದಂತೆ. ಹೌದು, ಮಹಿಳೆಯರಿಗೆ ಹೆಚ್ಚು ಚಳಿಯಾಗುತ್ತದೆ ಎಂದು ಅಧ್ಯಯನವೊಂದು ಕಂಡುಹಿಡಿದಿದೆ.
ಪುರುಷರು ಮತ್ತು ಮಹಿಳೆಯರ ನಡುವಿನ ಜೈವಿಕ ವ್ಯತ್ಯಾಸಗಳಿಂದಾಗಿ ಮಹಿಳೆಯರು ದೇಹದಲ್ಲಿ ಶಾಖವನ್ನು ಉತ್ಪಾದಿಸುವಂತಹ ಕಡಿಮೆ ಸ್ನಾಯುಗಳನ್ನು ಹೊಂದಿರುತ್ತಾರೆ. ಮಹಿಳೆಯರು ತಮ್ಮ ಚರ್ಮ ಮತ್ತು ಸ್ನಾಯುಗಳ ನಡುವೆ ಹೆಚ್ಚು ಕೊಬ್ಬನ್ನು ಹೊಂದಿರುವುದರಿಂದ ಚರ್ಮವು ತಣ್ಣಗಾಗುತ್ತದೆ. ಏಕೆಂದರೆ ಇದು ರಕ್ತನಾಳಗಳಿಂದ ಸ್ವಲ್ಪ ದೂರದಲ್ಲಿದೆ. ಹೀಗಾಗಿ ಮಹಿಳೆಯರು ಶೀತವನ್ನು ವೇಗವಾಗಿ ಅನುಭವಿಸುತ್ತಾರೆ.
ರಕ್ತದ ಕೊರತೆ ಇರುವವರು, ಅಂದರೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವವರಿಗೆ ಬೇಗ ಚಳಿಯಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಹಿಮೋಗ್ಲೋಬಿನ್ ಕಡಿಮೆ ಇರುವುದರಿಂದ ಪುರುಷರಿಗಿಂತ ಬೇಗ ಚಳಿಯಾಗುತ್ತದೆ. ಏಕೆಂದರೆ ಮಹಿಳೆಯರು ಮತ್ತು ಪುರುಷರ ದೇಹದ ರಚನೆಯಲ್ಲಿ ವ್ಯತ್ಯಾಸವಿದೆ.
ಮಹಿಳೆಯರಿಗೆ ಸ್ನಾಯುವಿನ ದ್ರವ್ಯರಾಶಿ ಕಡಿಮೆ ಇರುತ್ತದೆ. ಇನ್ನು, ವಯಸ್ಸು ಮತ್ತು ಜೀವನಶೈಲಿ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಬಹುದು. ವಯಸ್ಸಾದಂತೆ, ಆಂತರಿಕ ತಾಪಮಾನವನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತದೆ. ಅದಕ್ಕಾಗಿಯೇ ವಯಸ್ಸಾದವರಿಗೆ ಬಹಳ ಬೇಗ ಚಳಿಯಾಗುತ್ತದೆ.
ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳು ದೇಹದ ಮತ್ತು ಚರ್ಮದ ಉಷ್ಣತೆಗೆ ಸಹಕಾರಿಯಾಗಿವೆ. ಈಸ್ಟ್ರೊಜೆನ್ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ಸುತ್ತಮುತ್ತಲಿನ ಗಾಳಿಗೆ ದೇಹ ತಣ್ಣಗಾಗುತ್ತದೆ. ಮತ್ತು ಪ್ರೊಜೆಸ್ಟರಾನ್ ಚರ್ಮದಲ್ಲಿನ ನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದಲೂ ಸಹ ಮಹಿಳೆಯರು ತಂಪನೆಯ ಅನುಭವ ಪಡೆದುಕೊಳ್ಳುತ್ತಾರೆ. ಈ ಹಾರ್ಮೋನ್ ಗಳ ಸಮತೋಲನವು ಋತುಚಕ್ರದ ಜೊತೆಗೆ ನಿರಂತರವಾಗಿ ಬದಲಾಗುತ್ತದೆ. ಅಲ್ಲದೇ ಈ ಹಾರ್ಮೋನುಗಳು ಮಹಿಳೆಯರ ಕೈ, ಪಾದಗಳು ಮತ್ತು ಕಿವಿಗಳನ್ನು ಪುರುಷರಿಗಿಂತ ಮೂರು ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಂಪಾಗುವಂತೆ ಮಾಡುತ್ತದೆ.