Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಾಸನ : ಜಿಲ್ಲೆಯಲ್ಲಿ ನಿಲ್ಲದ ಮಾನವ ಹಾಗೂ ಕಾಡಾನೆ ನಡುವಿವ ಸಂಘರ್ಷಕ್ಕೆ ಸಕಲೇಶಪುರ ತಾಲ್ಲೂಕಿನ, ಮೋಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮತ್ತೋರ್ವ ಮಹಿಳೆ ಬಲಿಯಾಗಿದ್ದಾರೆ.
ಶೋಭ (40) ಮೃತಪಟ್ಟ ಮಹಿಳೆ., ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಕಾಡಾನೆ ಮಹಿಳೆಯನ್ನು ತುಳಿದು ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ.
ಕಾಡಾನೆ ದಾಳಿಗೆ ಮೃತಪಟ್ಟಿರುವ 40 ವರ್ಷದ ಮಹಿಳೆ ಸಾವಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಯನ್ನು ಮರಳಿ ಕಾಡಿಗೆ ಮರಳಿಸಲು ಅಥವಾ ಆನೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ಸೂಚಿಸಿರುವ ಅವರು, ಕೂಡಲೇ ಸ್ಥಳಕ್ಕೆ ತೆರಳಿ, ಪರಿಸ್ಥಿತಿ ನಿಭಾಯಿಸುವಂತೆ ಹಾಸನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿಯೊಂದು ಜೀವವೂ ಅಮೂಲ್ಯ, ಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಆಕಸ್ಮಿಕವಾಗಿ ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಆಸರೆಯಾಗಲು ನಿಯಮಾನುಸಾರ ಪರಿಹಾರ ನೀಡುವಂತೆಯೂ ತಿಳಿಸಿದ್ದಾರೆ. ವನ್ಯಜೀವಿಗಳಿಂದ ಮಾನವ ಜೀವ ಹಾನಿ ಸಂಭವಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಆನೆಗಳ ಸಂಚಾರದ ಬಗ್ಗೆ ಸ್ಥಳೀಯರಿಗೆ ಎಚ್ಚರಿಕೆ ಸಂದೇಶ ರವಾನಿಸಲು ಮತ್ತು ಆನೆ ಕಾರ್ಯಪಡೆ ಸಿಬ್ಬಂದಿಯನ್ನು ನಿಯೋಜಿಸಲೂ ಈಶ್ವರ ಖಂಡ್ರೆ ಸೂಚಿಸಿದ್ದಾರೆ.