Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಭಾರತದ ಐಕಾನಿಕ್ ವಾಚ್ ತಯಾರಕ ಸಂಸ್ಥೆ ಎಚ್ಎಂಟಿ ವಾಚಸ್ ಲಿಮಿಟೆಡ್, ತನ್ನ ಕಾನೂನುಬದ್ಧ ಅಸ್ತಿತ್ವವನ್ನು ಕೊನೆಗೊಳಿಸಲು ಮುಂದಾಗಿದೆ.
ಎಚ್ಎಂಟಿ ಲಿಮಿಟೆಡ್ ಗುರುವಾರ ಷೇರುಪೇಟೆಗೆ ನೀಡಿದ ಮಾಹಿತಿಯ ಪ್ರಕಾರ, ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಎಚ್ಎಂಟಿ ವಾಚಸ್ ಲಿಮಿಟೆಡ್’ ಹೆಸರನ್ನು ಕಂಪನಿಗಳ ರಿಜಿಸ್ಟ್ರಾರ್ (ಆರ್ಒಸಿ) ದಾಖಲೆಗಳಿಂದ ತೆಗೆದುಹಾಕಲು ಜನವರಿ 5, 2026 ರಂದು ಅರ್ಜಿ ಸಲ್ಲಿಸಲಾಗಿದೆ. ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 248 ರ ಅಡಿಯಲ್ಲಿ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ.
1961ರಲ್ಲಿ ಸರ್ಕಾರಿ ಒಡೆತನದ ಎಚ್ಎಂಟಿ ಲಿ. ಮತ್ತು ಜಪಾನ್ನ ಸಿಟಿಜನ್ ವಾಚ್ ಜಂಟಿಯಾಗಿ ‘ಎಚ್ಎಂಟಿ ವಾಚ್’ ಉತ್ಪಾದನೆಯನ್ನು ಆರಂಭಿಸಿದವು. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಈ ಸಂಸ್ಥೆ, ಭಾರತದ ಮೊದಲ ಕೈಗಡಿಯಾರ ತಯಾರಕನಾಗಿ ಹೊರಹೊಮ್ಮಿತ್ತು. ಕೈಗೆಟುಕುವ ದರಗಳಲ್ಲಿ ಲಭ್ಯವಿದ್ದ ಈ ವಾಚ್ಗಳು ಭಾರತೀಯರ ಅಚ್ಚುಮೆಚ್ಚಾಗಿದ್ದವು. ಎಚ್ಎಂಟಿಯ ವಾಚ್ಗಳು ಸರಳ ವಿನ್ಯಾಸವನ್ನು ಹೊಂದಿದ್ದವಾದರೂ, ಬಾಳಿಕೆಗೆ ಹೆಸರುವಾಸಿಯಾಗಿದ್ದವು. ಜನತಾ, ಪೈಲಟ್, ಕೊಹಿನೂರ್ ಎಚ್ಎಂಟಿಯ ಪ್ರಮುಖ ಬ್ರ್ಯಾಂಡ್ಗಳಾಗಿದ್ದವು. ಇದುವರೆಗೂ 10 ಕೋಟಿಗೂ ಹೆಚ್ಚಿನ ವಾಚುಗಳು ಮಾರಾಟವಾಗಿರುವ ಅಂದಾಜಿದೆ.
ವರ್ಷ ಕಳೆದಂತೆ ಅನೇಕ ವಾಚ್ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ 2000ದ ಬಳಿಕ ಎಚ್ಎಂಟಿ ಪತನ ಆರಂಭವಾಗಿತ್ತು. ಇದೀಗ ಶಾಶ್ವತವಾಗಿ ತನ್ನ ಟಿಕ್ ಟಿಕ್ ಸದ್ದನ್ನು ನಿಲ್ಲಿಸಲಿದೆ.
ಒಟ್ಟಾರೆಯಾಗಿ, ದಶಕಗಳ ಕಾಲ ಭಾರತೀಯರ ಸಮಯದ ಜೊತೆಗಾರನಾಗಿದ್ದ ‘ಎಚ್ಎಂಟಿ’ ಬ್ರಾಂಡ್ನ ವಾಚ್ ವಿಭಾಗವು ಇದೀಗ ಕಾನೂನಾತ್ಮಕವಾಗಿಯೂ ವಿದಾಯ ಹೇಳುತ್ತಿದೆ. ಅಲ್ಲಿಗೆ ಎಚ್ಎಂಟಿ ಸಂಪೂರ್ಣವಾಗಿ ಇತಿಹಾಸದ ಪುಟವನ್ನು ಸೇರಲಿದೆ.