Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಕೇಂದ್ರ ಮಾಜಿ ಸಚಿವೆ, ಬಿಜೆಪಿಯ ಮಿಂಚಿನ ಬಳ್ಳಿ ಎನಿಸಿದ್ದ ದಿವಂಗತ ಸುಷ್ಮಾ ಸ್ವರಾಜ್ ಅವರ ಪತಿ ಹಾಗೂ ಬಿಜೆಪಿ ಸಂಸದೆ ಬನ್ಸುರಿ ಸ್ವರಾಜ್ ಅವರ ತಂದೆ ಸ್ವರಾಜ್ ಕೌಶಲ್ ಗುರುವಾರ ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾದರು.
ಸ್ವರಾಜ್ ಕೌಶಲ್ ದೆಹಲಿಯ ತಮ್ಮ ನಿವಾಸದಲ್ಲಿ ಗುರುವಾರ ಕೊನೆಯುಸಿರೆಳೆದರು. ಸ್ವರಾಜ್ ಕೌಶಲ್ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ 4.30 ಕ್ಕೆ ದೆಹಲಿಯ ಲೋಧಿ ರಸ್ತೆಯ ಸ್ಮಶಾನದಲ್ಲಿ ನೆರವೇರಿತು.
ಮಿಜೋರಾಂನ ಮಾಜಿ ರಾಜ್ಯಪಾಲರು, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು ಮತ್ತು ದಿವಂಗತ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಪತಿಯಾಗಿದ್ದ ಸ್ವರಾಜ್ ಕೌಶಲ್ ಹಠಾತ್ ನಿಧನವು ರಾಜಕೀಯ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ಬಿಜೆಪಿ ಎಕ್ಸ್ ಹ್ಯಾಂಡಲ್ ಪೋಸ್ಟ್ ಮೂಲಕ ಈ ಸುದ್ದಿಯನ್ನು ದೃಢಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಸ್ವರಾಜ್ ಕೌಶಲ್ ಅವರ ನಿಧನ ದುಃಖ ತಂದಿದೆ ಎಂದು ಅವರು ಹೇಳಿದ್ದಾರೆ.
ಜುಲೈ 12, 1952 ರಂದು ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಜನಿಸಿದ ಅವರು ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. ಈ ಮೂಲಕ ಅವರು ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.
1990 ರಲ್ಲಿ 37ನೇ ವಯಸ್ಸಿನಲ್ಲಿ ಮಿಜೋರಾಂನ ರಾಜ್ಯಪಾಲರಾಗಿ ನೇಮಕಗೊಂಡ ಅವರು, ಭಾರತದ ಅತ್ಯಂತ ಕಿರಿಯ ರಾಜ್ಯಪಾಲರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದರು. ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅವರ ಹೆಸರು ದಾಖಲಾಗಿದೆ. 1998 ರಿಂದ 2004 ರವರೆಗೆ ರಾಜ್ಯಸಭೆಯಲ್ಲಿ ಅವರು ಹರಿಯಾಣ ವಿಕಾಸ್ ಪಕ್ಷವನ್ನು ಪ್ರತಿನಿಧಿಸಿದ್ದರು.
ರಾಜ್ಯಪಾಲರಾಗುವ ಮೊದಲು ಅಂದರೆ 1987 ರಿಂದ 1990 ರವರೆಗೆ ಮಿಜೋರಾಂನ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಪ್ರಾರಂಭವಾದ ಸುಷ್ಮಾ ಹಾಗೂ ಸ್ವರಾಜ್ ಅವರ ಸ್ನೇಹ ಮುಂದೆ ಮದುವೆಗೆ ತಿರುಗಿತು. ಜುಲೈ 13, 1975 ರಂದು ಸುಷ್ಮಾ ಸ್ವರಾಜ್ ಅವರನ್ನು ವಿವಾಹವಾದರು.
ಅವರ ಈ ಪ್ರೇಮ ವಿವಾಹವು ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸಬೇಕಾಯಿತು. ಸ್ವರಾಜ್ ಕೌಶಲ್ ಅವರನ್ನು ಸುಪ್ರೀಂ ಕೋರ್ಟ್‌ನ ಪ್ರಮುಖ ಕ್ರಿಮಿನಲ್ ವಕೀಲರಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು.
https://x.com/BJP4Delhi/status/1996502714386366880?t=ZfA4z9Xkuob7LtJ9wmBxwA&s=19