Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳು, ಲೈಂಗಿಕ ಕಿರುಕುಳ ಮತ್ತು ಮಾನಸಿಕ ಒತ್ತಡಕ್ಕೆ ತುತ್ತಾಗಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
22 ವರ್ಷದ ಅಚಲ ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದು ಬಂದಿದೆ. ಹಾಸನ ಜಿಲ್ಲೆ ಮೂಲದ ಅಚಲ ಎಂಬ ಯುವತಿ ಇತ್ತೀಚೆಗೆ ಎಂಜಿನಿಯರಿಂಗ್ ಪದವಿ ಪೂರೈಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಲು ತಯಾರಿ ನಡೆಸುತ್ತಿದ್ದಳು. ಈ ಅವಧಿಯಲ್ಲಿ ತನ್ನ ದೂರದ ಸಂಬಂಧಿ ಮಯಾಂಕ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು ಆದರೆ ಈ ಸ್ನೇಹವೇ ಆಕೆಯ ಜೀವಕ್ಕೆ ಅಪಾಯವೊಡ್ಡಿದೆ.
ಅಚಲ ಮೃತದೇಹ ಪತ್ತೆಯಾದ ತಕ್ಷಣ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು. ಆದರೆ ಮಗಳು ಬಿಟ್ಟು ಹೋದ ಮೊಬೈಲ್‌ನಲ್ಲಿ ಸಾವಿರಾರು ಕರೆಗಳು, ಧಮಕಿ ಮೆಸೇಜ್‌ಗಳು, ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ ಚಾಟ್‌ಗಳು ಸಿಕ್ಕಿದ ಬಳಿಕ ಕುಟುಂಬಸ್ಥರು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರೇರೇಪಣೆ), 354A (ಲೈಂಗಿಕ ಕಿರುಕುಳ), 506 (ಕ್ರಿಮಿನಲ್ ಬೆದರಿಕೆ) ಈ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆದರೆ ಘಟನೆ ನಡೆದು ಸುಮಾರು 10 ದಿನ ಕಳೆದರೂ ಆರೋಪಿ ಮಯಾಂಕ್ ಮತ್ತು ಅವನ ತಾಯಿ ಮೈನಾ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಳಂಬಕ್ಕೆ ಅಚಲ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ಮಗಳ ಜೀವ ತೆಗೆದವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಿ ಎಂದು ಒತ್ತಾಯಿಸಿದ್ದಾರೆ.
ನಟಿ ಆಶಿಕಾ ರಂಗನಾಥ್ ಇದುವರೆಗೆ ಈ ಘಟನೆ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಆದರೆ ಕುಟುಂಬದಲ್ಲಿ ಆಘಾತ ಮತ್ತು ದುಃಖದ ವಾತಾವರಣವಿದೆ ಎನ್ನಲಾಗಿದೆ.