Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಅತಿದೊಡ್ಡ ಕ್ಷಿಪ್ರ ಕ್ರಾಂತಿಯಾಗುವ ಸಾಧ್ಯತೆ ಗೋಚರಿಸಿದೆ. ಏನೂ ಇಲ್ಲ, ಏನೂ ಇಲ್ಲ ಎನ್ನುತ್ತಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣಗಳು ದಾಳ ಉರುಳಿಸುತ್ತಿವೆ. ಇಬ್ಬರೂ ನಾಯಕರು ಪರೋಕ್ಷವಾಗಿ ಶಾಸಕರ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಮತ್ತೊಂದು ತಂಡ ದೆಹಲಿಗೆ ಭೇಟಿ ನೀಡಿದೆ.
ಕಳೆದ ವಾರವಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ 9 ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದರು. ಇಂದು 6 ಶಾಸಕರ ತಂಡ ದೆಹಲಿಗೆ ತೆರಳಿದ್ದು ಹೈಕಮಾಂಡ್ ನಾಯಕರ ಭೇಟಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮದ್ದೂರು ಶಾಸಕ ಕದಲೂರು ಉದಯ್ ನೇತೃತ್ವದ ಶಾಸಕರ ತಂಡ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ನೀಡುವಂತೆ ಅವರ ಪರ ಮಾತುಕತೆಗಾಗಿ ಹೈಕಮಾಂಡ್ ನಾಯಕರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.