newsics.com
ಅಮೆರಿಕದ ಚಿಕಾಗೋದ ಮಿಚಿಗನ್ ಸರೋವರದಲ್ಲಿ ಈಜಲು ಹೋಗಿದ್ದ ಹೈದರಾಬಾದ್ ಮೂಲದ ಉದ್ಯೋಗಿಯೊಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಹೈದರಾಬಾದ್ ನಗರದ ಕಾಟೇದಾನದ ಅಕ್ಷಿತ್ ರೆಡ್ಡಿ (26) ಸಾವನ್ನಪ್ಪಿರುವ ಯುವಕ. ಇವರ ತಂದೆ ಗೋಪಾಲ್ ರೆಡ್ಡಿ ಮಹೆಬೂಬ್‌ನಗರ ಜಿಲ್ಲೆಯ ಅಡ್ಡಕುವಿನ ಗ್ರಾಮದವರು. 25 ವರ್ಷಗಳ ಹಿಂದೆ ಕಾಟೇದಾನಕ್ಕೆ ವಲಸೆ ಬಂದಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಅಕ್ಷಿತ್ ರೆಡ್ಡಿ ಸೇರಿ ಒಟ್ಟು ಮೂವರು ಮಕ್ಕಳಿದ್ದರು. ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿದ್ದ ತಂದೆ ಉನ್ನತ ವ್ಯಾಸಂಗಕ್ಕಾಗಿ 3 ವರ್ಷದ ಹಿಂದೆ ಮಗನನ್ನು ಅಮೆರಿಕಕ್ಕೆ ಕಳುಹಿಸಿದ್ದರು. ಅಲ್ಲಿನ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಮುಗಿಸಿದ್ದ ಅಕ್ಷಿತ್ ಅಲ್ಲೇ ಉದ್ಯೋಗ ಮಾಡಿಕೊಂಡಿದ್ದರು.
ಹೀಗಾಗಿ ಇನ್ನೇನು ಡಿಸೆಂಬರ್ನಲ್ಲಿ ಮದುವೆ ಮಾಡಬೇಕೆಂದು ಎಲ್ಲ ಅಂದುಕೊಂಡಿದ್ದರು. ಇದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಿ ಅಮೆರಿಕದಲ್ಲಿದ್ದ ಅಕ್ಷಿತ್ಗೆ ಈ ಬಗ್ಗೆ ಕೂಡ ತಿಳಿಸಿದ್ದರು. ಇದಕ್ಕೆ ಓಕೆ ಎಂದು ಹೇಳಿದ್ದನು. ಆದರೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಅಕ್ಷಿತ್ ಈಜಾಡಲೆಂದು ಅಮೆರಿಕದಲ್ಲಿನ ಚಿಕಾಗೋದ ಮಿಚಿಗನ್ ಸರೋವರಕ್ಕೆ ಹೋಗಿದ್ದಾರೆ. ಈ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು ಪೊಲೀಸರು ಮೃತದೇಹ ಹೊರ ತೆಗೆದಿದ್ದಾರೆ. ಇನ್ನೊಬ್ಬ ಯುವಕನನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಅಕ್ಷಿತ್ ಮೃತದೇಹ ಹೈದರಾಬಾದ್ ತಲುಪಿದ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೋವಿನಲ್ಲೇ ಕುಟುಂಬಸ್ಥರು ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.