newsics.com
ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಟೋಲ್ ಪ್ಲಾಜಾಗಳಿಗೆ ಬದಲಾಗಿ ಪ್ರಾಯೋಗಿಕವಾಗಿ ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಈ ಹೆದ್ದಾರಿಯಲ್ಲಿ ಗ್ಲೋಬಲ್ ನೇವಿಗೇಷನ್ ಸೆಟಲೈಟ್ ಸಿಸ್ಟಂ (ಜಿ ಎನ್ ಎನ್ ಎಸ್) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ತಿಳಿಸಿದ್ದಾರೆ.
ಉಪಗ್ರಹ ಆಧಾರಿತ ವ್ಯವಸ್ಥೆಯ ದಕ್ಷತೆಯನ್ನು ತಿಳಿದುಕೊಳ್ಳಲು ಪ್ರಾಯೋಗಿಕವಾಗಿ ಈ ಹೆದ್ದಾರಿಯಲ್ಲಿ ಜಾರಿಗೊಳಿಸಲಾಗಿದೆ. ತೃಪ್ತಿಕರ ಎಂದು ಕಂಡು ಬಂದರೆ ದೇಶಾದ್ಯಂತ ಸಂಪೂರ್ಣವಾಗಿ ಉಪಗ್ರಹ ಆಧಾರಿತ ವ್ಯವಸ್ಥ ಜಾರಿಗೆ ಬರಲಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯ ಜತೆಗೆ ಹರಿಯಾಣದ ಪಾಣಿಪತ್- ಹಿಸಾರ್ ರಾಷ್ಟ್ರೀಯ ಹೆದ್ದಾರಿ 709 ರಲ್ಲಿಯೂ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇಡೀ ದೇಶದಲ್ಲಿ ಜಿ ಎನ್ ಎಸ್ ಎಸ್ ವ್ಯವಸ್ಥೆಗೆ ಈ ಎರಡು ಹೆದ್ದಾರಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನೇ ಬಳಸಿಕೊಡು ಜಿಎನ್ ಎಸ್ ಎಸ್ -ಇಟಿಸಿ ವ್ಯವಸ್ಥೆ ಜಾರಿಗೆ ಬರಲಿದೆ. ಸ್ವಲ್ಪ ದಿನಗಳ ಕಾಲ ಈ ವ್ಯವಸ್ಥೆ ಜಾರಿಯಲ್ಲಿರಲಿದ್ದು ನಂತರ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.