newsics.com
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣಗೆ ಜಾಮೀನು ಮಂಜೂರಾಗಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜೂನ್ 23 ರಂದು ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್ ರೇವಣ್ಣಗೆ ಈಗ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ.
ಪ್ರಕರಣ ನಡೆದು 29 ದಿನಗಳ ನಂತರ ಈಗ ಸೂರಜ್‌ಗೆ ಜಾಮೀನು ಸಿಕ್ಕಿದೆ. ಸೂರಜ್ ವಿರುದ್ಧ ಇಬ್ಬರು ದೂರು ಸಲ್ಲಿಸಿದ್ದರು. ಇದರಲ್ಲಿ ಒಂದು ಕೇಸ್‌ನಲ್ಲಿ ಮಾತ್ರ ಜಾಮೀನು ಮಂಜೂರಾಗಿದೆ. ನ್ಯಾ.ಸಂತೋಷ್ ಗಜಾನನ ಭಟ್ ಅವರು ಷರತ್ತುಬದ್ಧ ಜಾಮೀನು ನೀಡಿದ್ದಾರೆ.
ಹಾಸನ ಜಿಲ್ಲೆಯ ಜೆಡಿಎಸ್ ಪಕ್ಷದ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಸೂರಜ್ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಸಿಐಡಿ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ದೂರುದಾರರಿಗೆ ಮತ್ತು ಸಂತ್ರಸ್ತರಿಗೆ ಬೆದರಿಕೆ ಹಾಕುವಂತಿಲ್ಲ. ತನಿಖೆಯಿಂದ ತಪ್ಪಿಸಿಕೊಳ್ಳಬಾರದು. ಕರೆದಾಗಲೆಲ್ಲ ವಿಚಾರಣೆಗೆ ಹಾಜರಾಗಬೇಕು. ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒದಗಿಸಬೇಕು.
ನ್ಯಾಯಾಲಯದಿಂದ ಲಿಖಿತ ಅನುಮತಿಯನ್ನು ಪಡೆಯದೆ ರಾಜ್ಯ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಬಾರದು. ಸಂತ್ರಸ್ಥನನ್ನು ಯಾವುದೇ ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು. ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಗ್ಗೆ 9.00ರಿಂದ ಸಂಜೆ 5ರೊಳಗೆ 6 ತಿಂಗಳ ಕಾಲ ಹಾಜರಾತಿ ಹಾಕಬೇಕು ಎಂದು ಷರತ್ತು ವಿಧಿಸಲಾಗಿದೆ.