newsics.com
ಕೊರೋನಾ ವೈರಸ್ ಭಾರತ ಹಾಗೂ ವಿಶ್ವಾದ್ಯಂತ ಸೃಷ್ಟಿಸಿದ ಅವಾಂತರಗಳು ಒಂದೆರೆಡಲ್ಲ. ಇದರ ನಡುವೆ ಅಕಾಡೆಮಿಕ್ ಜರ್ನಲ್ ಸೈನ್ಸ್ ಅಡ್ವಾನ್ಸ್ ನಡೆಸಿದ ಅಧ್ಯಯನ ವರದಿ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಕೊರೋನಾ ವಕ್ಕರಿಸಿದ ಬಳಿಕ ಭಾರತೀಯರ ಸರಾಸರಿ ಆಯಸ್ಸು 2.6 ವರ್ಷ ಕಡಿತಗೊಂಡಿದೆ ಎಂದು ಈ ವರದಿ ಹೇಳುತ್ತಿದೆ. ಆದರೆ ಈ ವರದಿ ಕುರಿತು ಕೇಂದ್ರ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದ್ದು ಈ ವರದಿಗೆ ಯಾವುದೇ ವೈದ್ಯಕೀಯ ಹಾಗೂ ವೈಜ್ಞಾನಿಕ ಆಧಾರವಿಲ್ಲ ಎಂದು ಅಲ್ಲಗೆಳೆದಿದೆ.
ಕೊರೋನಾ ಹರಡುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದೆ. ಬುಡಕಟ್ಟು ಸಮುದಾಯ, ಮುಸ್ಲಿಮರು ಸೇರಿದಂತೆ ಇತೆರ ಕೆಲ ಸಮದಾಯಗಳ ಹೆಣ್ಣುಮಕ್ಕಳ ಆಯಸ್ಸು 3.1 ವರ್ಷ ಕಡಿತಗೊಂಡಿದ್ದರೆ, ಪುರುಷರ ಆಯಸ್ಸು 2.1ರಷ್ಟು ಕಡಿತಗೊಂಡಿದೆ. 14 ರಾಜ್ಯಗಳ ಮಾದರಿಗಳು, ಅಂಕಿ ಅಂಶಗಳನ್ನು ಆಧರಿಸಿ ಈ ಅಧ್ಯಯನ ವರದಿ ತಯಾರಿಸಲಾಗಿದೆ. ಕೊರೋನಾ ಬಳಿಕ ಮನುಷ್ಯನ ಸರಾಸರಿ ಆಯಸ್ಸಿನ ವರ್ಷ ಇಳಿಕೆಯಾಗಿದೆ ಎಂದು ವರದಿ ಹೇಳುತ್ತಿದೆ.
14 ರಾಜ್ಯದ ಶೇಕಡಾ 23ರಷ್ಟು ಸ್ಯಾಂಪಲ್ ಪಡೆದು ಈ ವರದಿ ತಯಾರಿಸಲಾಗಿದೆ. ಈ ವರದಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಭಾರತದ ಜನಸಂಖ್ಯೆ, ಆರೋಗ್ಯ , ಕೊರೋನಾ ಪ್ರಕರಣ ಸೇರಿದಂತೆ ಹಲವು ಮಾಹಿತಿಗಳನ್ನು ಆಧರಿಸಿ ಈ ವರದಿ ತಯಾರಾಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.