ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕಾರಣದಿಂದ ಕಿರುಕುಳ ಅನುಭವಿಸಿದ ಹಲವು ನಟಿಯರು ಇದ್ದಾರೆ. ನಟಿಯರು ಮಾತ್ರವಲ್ಲದೇ ಕೆಲವು ನಟರಿಗೂ ಇಂತಹ ಕಹಿ ಅನುಭವ ಆಗಿದೆ. ಈ ಬಗ್ಗೆ ‘ಅನಿಮಲ್’ ಸಿನಿಮಾದ ನಟ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಿದ್ಧಾಂತ್ ಕಾರ್ಣಿಕ್, ಅವಕಾಶ ಕೇಳಲು ಹೋದಾಗ ವ್ಯಕ್ತಿಯೊಬ್ಬನಿಂದ ಸಿದ್ಧಾಂತ್ ಕಾರ್ಣಿಕ್ಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು. ಆ ಶಾಕಿಂಗ್ ಘಟನೆಯನ್ನು ಬಗ್ಗೆ ನೆನಪಿಸಿಕೊಂಡಿದ್ದಾರೆ.
ಸಿದ್ಧಾಂತ್ ಕಾರ್ಣಿಕ್ ಅವರಿಗೆ ಈಗ 41 ವರ್ಷ ವಯಸ್ಸು. ಕಿರುತೆರೆಯ ಹಲವು ಸೀರಿಯಲ್ಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಆದರೆ ಚಿತ್ರರಂಗಕ್ಕೆ ಬಂದಾಗ ಅವರಿಗೆ ಯಾವುದೇ ಗಾಡ್ ಫಾದರ್ ಇರಲಿಲ್ಲ. ಆಗ ಅವಕಾಶ ಕೇಳಿಕೊಂಡು ವ್ಯಕ್ತಿಯೊಬ್ಬರ ಬಳಿ ಸಿದ್ಧಾಂತ್ ಹೋಗಿದ್ದರು. ರಾತ್ರಿ ಮನೆಗೆ ಬರಲು ಹೇಳಿದ್ದ ಆತನಿಂದ ಅನುಮಾನದ ವರ್ತನೆ ಎದುರಾಗಿತ್ತು.
‘ಅದು 2005ರ ಸಮಯ. ಆಗ ನನಗೆ 22 ವರ್ಷ ವಯಸ್ಸು. ಆಗಷ್ಟೇ ನಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದೆ. ಸಂಘಟಕರೊಬ್ಬರನ್ನು ನಾನು ಭೇಟಿಯಾದೆ. ನನ್ನ ಬಗೆಗಿನ ವಿವರಗಳನ್ನು ಹಿಡಿದುಕೊಂಡು ರಾತ್ರಿ 10.30ಕ್ಕೆ ಮನೆಗೆ ಬರುವಂತೆ ಆತ ಹೇಳಿದೆ. ನನಗೆ ಸ್ವಲ್ಪ ವಿಚಿತ್ರ ಎನಿಸಿತು. ಆದರೂ ಅಲ್ಲಿಗೆ ಹೋದೆ. ಮನೆಯಲ್ಲಿ ಆತನ ಫ್ಯಾಮಿಲಿ ಫೋಟೋ ನೋಡಿದ ಬಳಿಕ ಅದು ಸುರಕ್ಷಿತ ಜಾಗ ಎನಿಸಿತು. ಆದರೆ ಮಾತುಕಥೆ ಶುರು ಮಾಡುತ್ತಾ ಆತ ರಾಜಿಯಾಗಬೇಕು ಎಂದು ಹೇಳಿದ’ ಎಂದಿದ್ದಾರೆ.
‘ಚಿತ್ರರಂಗದ ನಿಯಮಗಳ ಬಗ್ಗೆ ಆತ ವಿವರಿಸಿದ. ರಾಜಿಯಾಗಬೇಕು ಎಂಬ ಬಗ್ಗೆ ಸಣ್ಣ ಸುಳಿವು ನೀಡಿದ. ರಾಜಿ ಆಗುವ ತನಕ ಅವಕಾಶ ಸಿಗುವುದಿಲ್ಲ ಅಂತ ಹೇಳಿದ. ನಾನು ಆಗ ಚಿಕ್ಕವನಾಗಿದ್ದೆ. ಆತ ನನ್ನ ಹತ್ತಿರಕ್ಕೆ ಬಂದ. ಆಗ ನಾನು ಇದಕ್ಕೆಲ್ಲ ಸಿದ್ಧನಿಲ್ಲ ಅಂತ ಹೇಳಿದೆ. ನನ್ನ ವೃತ್ತಿಜೀವನವನ್ನು ನಾಶ ಮಾಡುವುದಾಗಿ ಆತ ಬೆದರಿಕೆ ಹಾಕಿದ. ಆದರೆ ನಾನು ಅದಕ್ಕೆಲ್ಲ ಹೆದರದೇ ಹೊರಬಂದೆ’ ಎಂದು ಸಿದ್ಧಾಂತ್ ಕಾರ್ಣಿಕ್ ಹೇಳಿದ್ದಾರೆ.