newsics.com
ಬೆಂಗಳೂರು: ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲುಗಳ ಟಿಕೆಟ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡ, ಮಧ್ಯಮ ವರ್ಗದ ಜನರೂ ವಂದೇ ಭಾರತ್ ರೈಲಿನಲ್ಲಿ ಓಡಾಡುವಂತೆ ಟಿಕೆಟ್ ದರ ಪರಿಷ್ಕರಣೆ ಮಾಡುತ್ತೇವೆ. ರೈಲು ಟಿಕೆಟ್ ದರ ಪರಿಷ್ಕರಣೆ ಸಂಬಂಧ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚೆ ಮಾಡಿದ್ದೇವೆ ಎಂದರು.
ರೈಲ್ವೆ ಅಂಡರ್‌ಪಾಸ್, ಮೇಲ್ಸೇತುವೆ ಕಾಮಗಾರಿಗೆ ಹಣ ಕೊಡಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಮಪಾಲು ಹಣ ನೀಡಬೇಕಾಗುತ್ತದೆ. ಬೆಂಗಳೂರು ಕಂಟೋನ್ಮೆಂಟ್ ಸ್ಟೇಷನ್ ಯೋಜನಾ ಮೊತ್ತ 485 ಕೋಟಿ ರೂ. ಯಶವಂತಪುರ ನಿಲ್ದಾಣದ ಯೋಜನಾ ಮೊತ್ತ 387 ಕೋಟಿ ರೂ. ಎಂದು ಹೇಳಿದರು.
ಯಶವಂತಪುರ-ಚನ್ನಸಂದ್ರ ನಡುವೆ 25 ಕಿ.ಮೀ ಮತ್ತು ಬೈಯ್ಯಪ್ಪನಹಳ್ಳಿ-ಹೊಸೂರು ನಡುವೆ 48 ಕಿ.ಮೀ. ಹಳಿ ಡಬ್ಲಿಂಗ್ ಯೋಜನೆಗೆ 814 ಕೋಟಿ ರೂಪಾಯಿ ವೆಚ್ಚವಾಗಲಿದೆ. ರೈಲ್ವೆ ಓವರ್ ಬ್ರಿಡ್ಜ್, ಅಂಡರ್‌ಪಾಸ್‌ನಲ್ಲಿ ತೊಂದರೆ ಆಗಲು ಬಿಡಲ್ಲ ಎಂದು ಸೋಮಣ್ಣ ಹೇಳಿದರು.
ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ವಿಭಿನ್ನ ರೀತಿಯಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಹೊಂದಲಿದೆ. ಹಿಂದೆ ರೈಲ್ವೆ ಅಂಡರ್ ಪಾಸ್ ಮತ್ತು ಮೇಲ್ಸೇತುವೆಗಳಿಗೆ ಕೇಂದ್ರ ಮತ್ತು ರಾಜ್ಯ ಸಹಯೋಗ ಇರುತ್ತಿತ್ತು. ಇದು ಎಷ್ಟರಮಟ್ಟಿಗೆ ಕಾರ್ಯೋನ್ಮುಖ ಆಗುತ್ತಿತ್ತೋ ಗೊತ್ತಿಲ್ಲ. ರೈಲುಗಳು ಬಂದಾಗ ಜನ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿದ್ದವು ಎಂದು ಹೇಳಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗಕ್ಕೆ 3 ಡಿಸಿ ನೇಮಕಾತಿ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಜತೆ ಮಾತನಾಡಿದ್ದೇನೆ. 40 ತಿಂಗಳಲ್ಲಿ ಸಬ್ಅರ್ಬನ್ ಯೋಜನೆ ಮುಗಿಸುವುದಾಗಿ ಹೇಳಲಾಗಿತ್ತು. 2022ರಲ್ಲಿ ಮೋದಿ ಚಾಲನೆ ಕೊಟ್ಟಾಗ 40 ತಿಂಗಳು ಎಂದು ಹೇಳಲಾಗಿತ್ತು. ನಮ್ಮ ನಿರೀಕ್ಷೆಯಂತೆ ಸಬ್ಅರ್ಬನ್ ರೈಲು ಯೋಜನೆ ಕೆಲಸ ನಡೆಯುತ್ತಿಲ್ಲ. ಮುಂದಿನ ತಿಂಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಂದು ಪರಿಶೀಲಿಸುತ್ತಾರೆ. 11,800 ಕೋಟಿ ರೂ. ಪೈಕಿ ರಾಜ್ಯ ಸರ್ಕಾರ ಇನ್ನೂ 5 ಕೋಟಿ ರೂ. ಕೊಡಬೇಕು. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ 5 ಕೋಟಿ ರೂ. ಬಾಕಿ ಕೊಡಬೇಕಿದೆ ಎಂದು ಸೋಮಣ್ಣ ಹೇಳಿದರು.
ಶಾಂತಂ ಪಾಪಂ ಟೆಲಿ ಸರಣಿಯಲ್ಲಿ ನಟ ದರ್ಶನ್ ಕಥೆ! ಏನಿದು ಡೇರ್ ಡೆವಿಲ್ ದೇವದಾಸ್ ಕಹಾನಿ?