newsics.com
ಬೆಂಗಳೂರು: ಜಗದ್ವಿಖ್ಯಾತಿ ಪಡೆದಿರುವ ಬೆಂಗಳೂರು ಕರಗ ಏಪ್ರಿಲ್ 12ರಂದು ನಡೆಯಲಿದ್ದು, ಕರಗ ನಿರಾತಂಕವಾಗಿ ನಡೆಯಲು ಅಗತ್ಯವಾದ ಸಿದ್ಧತೆಗಳನ್ನು ಆರಂಭಿಸುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕರಗ ಮಹೋತ್ಸವಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಕರಗ ಸಮಿತಿಯ ಪದಾಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಜಗದೀಶ್ ಮಾತನಾಡಿ, ಕರಗ ಶಕ್ತ್ಯೋತ್ಸವ ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಕರಗ ಉತ್ಸವ ನಡೆಯುವ ರಸ್ತೆಗಳಲ್ಲಿನ ಬೀದಿ ದೀಪಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ, ಎಲ್ಲಾ ಕಡೆ ವಿದ್ಯುತ್ ದೀಪಗಳ ಅಳವಡಿಕೆ ವ್ಯವಸ್ಥೆ ಮಾಡಬೇಕು. ವಿದ್ಯುತ್ ಸಂಪರ್ಕ ಕಡಿತಾಗೊಳ್ಳದಂತೆ ಬೆಸ್ಕಾಂ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕರಗ ಮಹೋತ್ಸವವು 4ನೇ ಏಪ್ರಿಲ್ 2025 ರಿಂದ 14ನೇ ಏಪ್ರಿಲ್ 2025 ರವರೆಗೆ ನಡೆಯಲಿದ್ದು, ಈ ವೇಳೆ ಸ್ವಚ್ಛತಾ ನಿರ್ವಹಣೆ ದೃಷ್ಟಿಯಿಂದ ಘನತ್ಯಾಜ್ಯ ವಿಭಾಗದ ಅಧಿಕಾರಿ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಸೂಚಿಸಿದ್ದಾರೆ.
ಕರಗ ಉತ್ಸವದ ವೇಳಾಪಟ್ಟಿ
- ಏಪ್ರಿಲ್ 4 ರಂದು ಶುಕ್ರವಾರ ರಾತ್ರಿ 10 ಗಂಟೆ ಹಾಗೂ ಮುಂಜಾನೆ 3 ಗಂಟೆಗೆ ‘ರಥೋತ್ಸವ ಮತ್ತು ಧ್ವಜಾರೋಹಣ’.
- ಏ. 5 ರಿಂದ 8 ರವರೆಗೆ (ಶನಿವಾರದಿಂದ ಮಂಗಳವಾರ) ರಾತ್ರಿ 7.30ಕ್ಕೆ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ.
- ಏ. 9 ಬುಧವಾರ ರಾತ್ರಿ 3 ಗಂಟೆಗೆ ‘ಆರತಿ ದೀಪೋತ್ಸವ.
- ಏ. 10 ಗುರುವಾರ ರಾತ್ರಿ 3 ಗಂಟೆಗೆ ಸಂಪಂಗಿಕೆರೆ ಅಂಗಳದ ಶಕ್ತಿ ಪೀಠದಲ್ಲಿ ಹಸಿ ಕರಗ.
- ಏ. 12 ಶನಿವಾರ ರಾತ್ರಿ 12.30 ಕ್ಕೆ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ಮಹೋತ್ಸವ
* ಏ. 13 ಭಾನುವಾರ ರಾತ್ರಿ 2 ಗಂಟೆ ಹಾಗೂ 4 ಗಂಟೆಗೆ ಪುರಾಣ ಪ್ರವಚನ ಹಾಗೂ ದೇವಸ್ಥಾನದಲ್ಲಿ ಗಾವು ಶಾಂತಿ
- ಏ. 14 ರಂದು ಸೋಮವಾರ ಸಂಜೆ 4 ಗಂಟೆ ಹಾಗೂ ರಾತ್ರಿ 12 ಗಂಟೆಗೆ ‘ವಸಂತೋತ್ಸವ ಧ್ವಜಾರೋಹಣ