newsics.com
ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಅಣುಬಾಂಬ್ ಹಾಕುವುದನ್ನು ತಡೆದಿದ್ದು ಭಾರತದ ಪ್ರಧಾನಿ ಮೋದಿ ಎಂದು ಪೋಲೆಂಡ್ ಸಚಿವ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಶಾಂತಿ ಸಂಧಾನದ ಲೇಪವನ್ನು ಹೆಚ್ಚಲು ವಿಶ್ವದ ಘಾಟಾನುಘಟಿ ರಾಷ್ಟ್ರಗಳ ನಾಯಕರು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಈ ಯುದ್ಧವನ್ನು ನಿಲ್ಲಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಕಲ ಪ್ರಯತ್ನ ನಡೆಸಿರುವುದು ಮತ್ತೊಮ್ಮೆ ರುಜುವಾತಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ಕುರಿತು ಮಾತನಾಡಿರುವ ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪರಮಾಣು ಯುದ್ಧತಂತ್ರದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಮನವೊಲಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿರುವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಅವರು, “ಪ್ರಧಾನಿ ಮೋದಿಯವರ ವಾರ್ಸಾ ಭೇಟಿ ನಮಗೆ ತುಂಬಾ ಒಳ್ಳೆಯದಾಗಿತ್ತು. ಪರಮಾಣು ಯುದ್ಧತಂತ್ರದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಪ್ರಧಾನಿ ಮೋದಿ ಪುಟಿನ್ ಅವರನ್ನು ಮನವೊಲಿಸಿದರು. ನಮಗೆ ಶಾಶ್ವತ ಶಾಂತಿ ಬೇಕು. ಉಕ್ರೇನ್‌ನಲ್ಲಿ ನಮಗೆ ಸ್ಥಿರ ಮತ್ತು ಸುಸ್ಥಿರ ಶಾಂತಿ ಬೇಕು” ಎಂದು ತಿಳಿಸಿದರು.