newsics.com
ಬೆಂಗಳೂರು: ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ ಅವರ ಮೆಸರ್ಸ್ ಕ್ಸಿರೋದ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 12 ಎಕರೆ ಭೂಮಿ 2023ರ ಜನವರಿ 2ರಂದು ಮಂಜೂರಾಗಿದೆ ಎಂದು ಕೆ ಐ ಎ ಡಿ ಬಿ ಸಿಇಒ ಡಾ. ಮಹೇಶ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಹಿಂದಿನ ಸರ್ಕಾರ ಅಧಿಕಾರದಲ್ಲಿ ಇದ್ದಾಗ, 2023ರ ಜನವರಿ 2ರಂದು ನಡೆದ 137ನೇ ರಾಜ್ಯ ಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಕಮಿಟಿ (ಎಸ್ ಎಲ್ ಎಸ್ ಡಬ್ಲ್ಯು ಸಿ ಸಿ) ಸಭೆಯಲ್ಲಿ ತುಮಕೂರು ಜಿಲ್ಲೆ ಸಿರಾ ಕೈಗಾರಿಕಾ ಪ್ರದೇಶದಲ್ಲಿ ಸದರಿ ಭೂಮಿ ಮಂಜೂರಾತಿಗೆ ಈ ಅನುಮೋದನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಕ್ಕಿನಿಂದ ತಯಾರಿಸಲಾಗುವ ಟಿಎಂಟಿ ಪಟ್ಟಿ, ಸರಳು ಹಾಗೂ ಸಹ-ಉತ್ಪನ್ನಗಳ ಘಟಕವನ್ನು 138 ಕೋಟಿ ಹೂಡಿಕೆಯಲ್ಲಿ ಸ್ಥಾಪಿಸಲಾಗುವುದು. ಇದರಿಂದ, ಸುಮಾರು 160 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕಂಪನಿ ಪ್ರಸ್ತಾವ ಸಲ್ಲಿಸಿತ್ತು ಎಂದೂ ಅವರು ವಿವರಿಸಿದ್ದಾರೆ.