newsics.com
ಕೊಪ್ಪಳ: ಒಂದು ಕೆಜಿ ದ್ರಾಕ್ಷಿಯ ಬೆಲೆ ನೂರಿರಬಹುದು, ಅಬ್ಬಬ್ಬಾ ಅಂದ್ರೆ ಇನ್ನೂರು ರೂಪಾಯಿ ಇರಬಹುದು. ಆದರೆ, ಈ ವಿದೇಶಿ ತಳಿಯ ದ್ರಾಕ್ಷಿ ಬೆಲೆ ಕೆಜಿಗೆ ಬರೋಬರಿ ಎಂಟು ಲಕ್ಷ ರೂಪಾಯಿ!

ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಿರುವ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಈ ದುಬಾರಿ ಬೆಲೆಯ ದ್ರಾಕ್ಷಿಯನ್ನು ಪ್ರದರ್ಶನಕ್ಕಿಡಲಾಗಿದೆ.
ಜಪಾನಿನಲ್ಲಿ ಬೆಳೆಯುವ ಜಗತ್ತಿನ ಅತ್ಯಂತ ದುಬಾರಿ ದ್ರಾಕ್ಷಿ ಹಣ್ಣು ‘ರೂಬಿ ರೋಮನ್’ ಪ್ರತಿ ಕೆಜಿಗೆ 8 ಲಕ್ಷ ರೂ. ಭಾರೀ ಮೌಲ್ಯದ ರೂಬಿ ರೋಮನ್ ದ್ರಾಕ್ಷಿ ಹಣ್ಣನ್ನು ಪ್ರದರ್ಶನದಲ್ಲಿ ಇಡಲಾಗಿದ್ದು, ಈ ಮೇಳದ ಮುಖ್ಯ ಆಕರ್ಷಣೆಯಾಗಿದೆ.

ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯು ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ವಿದೇಶಿ ಮತ್ತು ಅಧಿಕ ಬೆಲೆಯ ಹಣ್ಣಿನ ತಳಿ ಪ್ರದರ್ಶನ ಮಾಡುತ್ತಾ ಬಂದಿದೆ. ವಿದೇಶಿ ತಳಿ ಪರಿಚಯಿಸಿ ಇಲ್ಲಿನ ರೈತರು ಅದನ್ನು ಬೆಳೆಯಲು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.
ಕಳೆದ ವರ್ಷ ‘ಮಿಯಾ ಚಾಕಿ’ ಎಂಬ ಮಾವಿನಕಾಯಿ ತಳಿ ಪರಿಚಯಿಸಲಾಗಿತ್ತು. ಈ ತಳಿಯ ಮಾವನ್ನು ರೈತರು ಬೆಳೆಯಲು ಆರಂಭಿಸಿದ್ದಾರೆ. ಅದೇ ರೀತಿ ಈ ಬಾರಿ ಮೇಳದಲ್ಲಿ ರೂಬಿ ರೋಮನ್ ಹೆಸರಿನ ದುಬಾರಿ ಬೆಲೆಯ ದ್ರಾಕ್ಷಿಯನ್ನು ಪರಿಚಯಿಸಿದೆ.
ಸಾಮಾನ್ಯ ದ್ರಾಕ್ಷಿಗಿಂತ ರೂಬಿ ರೋಮನ್ ತಳಿಯು ಬಹಳಷ್ಟು ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಕೆಂಪು ಬಣ್ಣದಿಂದ ಕೂಡಿದ ಈ ದ್ರಾಕ್ಷಿ ತಳಿಯ ವೈಜ್ಞಾನಿಕ ಹೆಸರು ವಿಟೀಸ್ ಲ್ಯಾಬ್‌ಸ್ಯನಾ ಬೇಲಿ.
ಜಪಾನ್ ದೇಶದಲ್ಲಿ 2008ರಲ್ಲಿ ಈ ಹಣ್ಣಿನ ಬೆಲೆ 700 ಗ್ರಾಂ.ಗೆ 1 ಲಕ್ಷ ರೂ.ವರೆಗೆ ಇತ್ತು. ವರ್ಷದಿಂದ ವರ್ಷಕ್ಕೆ ಖ್ಯಾತಿ ಪಡೆದು ಬೆಲೆ ಗಗನಮುಖಿಯಾಗಿದೆ. ಸದ್ಯ ಕೆಜಿಗೆ 8 ಲಕ್ಷ ರೂ.ವರೆಗೆ ಬೆಲೆಯಿದೆ.
ಈ ಹಣ್ಣಿನಲ್ಲಿ ವಿಟಮಿನ್ ಸಿ ಯಥೇಚ್ಛವಾಗಿದ್ದು, ಸಾಮಾನ್ಯ ದ್ರಾಕ್ಷಿಗಿಂತ ಶೇ.15ರಷ್ಟು ಸಕ್ಕರೆ ಅಂಶ ಹೆಚ್ಚಿದೆ.
ಈ ತಳಿಯ 250 ಗ್ರಾಂ. ದ್ರಾಕ್ಷಿಯನ್ನು ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕಂದ ಅವರು ಮುಂಬೈನ ವ್ಯಾಪಾರಿಯಿಂದ ತರಿಸಿದ್ದಾರೆ. ಈ ಹಣ್ಣನ್ನು ನೋಡಿ ಜನರು ಸೆಲ್ಫಿಗಾಗಿ ಮುಗಿಬಿದ್ದರು. ಕೆಲ ರೈತರು ಅಧಿಕಾರಿಗಳ ಬಳಿ ಈ ತಳಿಯ ಮಾಹಿತಿ ಪಡೆದರು. ಇಷ್ಟು ದುಬಾರಿ ತಳಿಯನ್ನು ಕಂಡು ಆಶ್ಚರ್ಯಪಟ್ಟರು.
Modi ಮಕ್ಕಳಲ್ಲಿ ಬೊಜ್ಜು ನಾಲ್ಕು ಪಟ್ಟು ಹೆಚ್ಚಳ: ಪ್ರಧಾನಿ ಮೋದಿ ಮಹತ್ವದ ಸಲಹೆ
sleeping tips:ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ವಾ? ಈ ಹಣ್ಣುಗಳನ್ನು ತಿನ್ನಿರಿ