newsics.com
ನವದೆಹಲಿ: ಕರ್ನಾಟಕ ಸರ್ಕಾರ ಮತ್ತು ಮೈಸೂರು ರಾಜವಂಶಸ್ಥರ ನಡುವೆ ಶುರುವಾಗಿರುವ ಆಸ್ತಿ ಗುದ್ದಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅರಮನೆ ಜಾಗಕ್ಕೆ ಟಿಡಿಆರ್ ಪಾವತಿಸುವ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಕೈಗೊಂಡ ತೀರ್ಮಾನಕ್ಕೆ ಸುಪ್ರೀಂ ತೀರ್ಪು ನೀಡಿದೆ.
ಕರ್ನಾಟಕ ಸರ್ಕಾರ ರಸ್ತೆ ನಿರ್ಮಾಣ ಉದ್ದೇಶಕ್ಕೆ ಬಳಸಲು ಉದ್ದೇಶಿಸಿದ್ದ ಮೈಸೂರು ರಾಜರಿಗೆ ಸೇರಿದ ಬೆಂಗಳೂರಿನ ಅರಮನೆ ಜಾಗಕ್ಕೆ, ಟಿಡಿಆರ್ ಪಾವತಿಸುವಂತೆ ಕೋರ್ಟ್ ಸೂಚಿಸಿದೆ. ಈ ಹಿಂದೆ ನೀಡಿದ್ದ ಆದೇಶದಲ್ಲಿ ಚರ್ಚೆ ಅಥವಾ ಮರು ಪರಿಶೀಲನೆಗೆ ಆಸ್ಪದವೇ ಇಲ್ಲ ಎನ್ನುವ ವಿಚಾರವನ್ನು ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ. ನಾವು ಈಗಾಗಲೇ ಈ ಬಗ್ಗೆ ಆದೇಶ ಹೊರಡಿಸಿದ್ದೇವೆ. ಇದನ್ನು ಅಧಿಕಾರಿಗಳು ಪಾಲಿಸಲೇಬೇಕಾಗಿದೆ, ಇಲ್ಲದೇ ಹೋದಲ್ಲಿ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ಕೂಡ ಕೊಟ್ಟಿದೆ.
ಆದೇಶ ಪಾಲಿಸುವಂತೆ ಸುಪ್ರೀಂ ಸೂಚನೆ
ಮೈಸೂರು ಅರಮನೆ ಪರ ವಕೀಲರು ಕರ್ನಾಟಕ ಸರ್ಕಾರದ ವಾದಕ್ಕೆ ತಿರುಗೇಟು ನೀಡಿದ್ದು, ಮಾನ್ಯ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಸುಪ್ರೀಂಕೋರ್ಟ್ನ ಹಿಂದಿನ ಆದೇಶ ಪಾಲಿಸಲು 6 ವಾರ ಸಮಯ ನೀಡಿದ ಅವಧಿಯಲ್ಲೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ವಾದಿಸುವ ಮೂಲಕ, ಮಾಹಿತಿ ನೀಡಿದ್ದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾಯಪೀಠ, ಟಿಡಿಆರ್ ಹಸ್ತಾಂತರ ಕುರಿತ ನಮ್ಮ ಹಿಂದಿನ ಆದೇಶ ಮರುಪರಿಶೀಲನೆ ಅಸಾಧ್ಯ ಎಂದು ಹೇಳಿದೆ. ಹೀಗೆ ಅದನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಖಡಕ್ ಸೂಚನೆ ನೀಡಿ ಅರ್ಜಿ ವಿಚಾರಣೆಯನ್ನ ಇದೀಗ ಮುಂದೂಡಿಕೆ ಮಾಡಲಾಗಿದೆ.