newsics.com
ಕಿಂಗ್ ಫಿಶರ್ ಮತ್ತು ಹೈನೆಕೆನ್ ಬಿಯರ್‌ಗಳ ತಯಾರಕರಾದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್, ತೆಲಂಗಾಣ ಬೆವರೇಜಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ ತನ್ನ ಬಿಯರ್ ಪೂರೈಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಈ ಬಿಯರ್‌ಗಳು ತನ್ನದೇ ಆದ ಮದ್ಯ ಪ್ರಿಯ ಗ್ರಾಹಕರನ್ನು ಹೊಂದಿದೆ. ಈಗ ಯುವ ಜನತೆ ಹಾಟ್ ಡ್ರಿಂಕ್ಸ್‌ಗಿಂತ ಬಿಯರ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರಲ್ಲಿಯೂ ಕಿಂಗ್ ಫಿಶರ್ ಬಿಯರ್ ಕ್ರೇಜ್ ಬೇರೆಯದೇ ಇದೇ. ಇದೀಗ ಸ್ಥಗಿತಗೊಳಿಸಲು ನಿರ್ಧರಿಸಿರುವುದು ಬಿಯರ್ ಪ್ರಿಯರಿಗೆ ಶಾಕ್ ಆಗಿದೆ.
ಪೂರೈಕೆ ನಿಲ್ಲಿಸಲು ಕಾರಣವೇನು?
2 ವರ್ಷದಿಂದಲೂ ತೆಲಂಗಾಣದಲ್ಲಿ ಬಿಯರ್ ಮೂಲ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕಂಪನಿ ಮನವಿ ಮಾಡಿತ್ತು. ಆದರೆ ತೆಲಂಗಾಣ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಭಾರೀ ಪ್ರಮಾಣದ ನಷ್ಟವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ 2019-20ನೇ ಹಣಕಾಸು ವರ್ಷದಿಂದ ಯುನೈಟೆಡ್ ಬ್ರೇವರಿಸ್ ಬಿಯರ್‌ನ ಮೂಲ ಬೆಲೆಯನ್ನು TGBCL ಪರಿಷ್ಕರಿಸಿಲ್ಲ, ಇದು ರಾಜ್ಯದಲ್ಲಿ ಕಂಪನಿಗೆ ಆರ್ಥಿಕ ನಷ್ಟಕ್ಕೆ ಕಾರಣ ಎಂದು ಕಂಪನಿ ದೂರಿದೆ.
ಹೆಚ್ಚುತ್ತಿರುವ ಬಿಯರ್ ತಯಾರಿಕೆಗೆ ಕಚ್ಚಾ ವಸ್ತುಗಳ ಬೆಲೆಗಳಿಂದ ಉತ್ಪಾದನಾ ವೆಚ್ಚದಲ್ಲಿ 40% ಹೆಚ್ಚಳವನ್ನು ಸರಿದೂಗಿಸಲು 2024ರ ನವೆಂಬರ್‌ನಲ್ಲಿ ತೆಲಂಗಾಣ ಸರ್ಕಾರವನ್ನು ಕಂಪನಿ ಒತ್ತಾಯಿಸಿತ್ತು. ಅಂದರೆ ಪ್ರತಿ ಬಾಟಲಿಗೆ ಕನಿಷ್ಠ 10 ರೂ.ಗಳಷ್ಟು ಬಿಯರ್ ಬೆಲೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿತ್ತು. ಇನ್ನೂ ಡಿಸೆಂಬರ್‌ನಲ್ಲಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಿಯರ್ ಕಂಪನಿಗಳ ಬೇಡಿಕೆಗಳನ್ನು ತಿರಸ್ಕರಿಸಿದ್ದರು.
2019 ರಿಂದ ಉತ್ಪಾದನಾ ವೆಚ್ಚವನ್ನು ಆಧರಿಸಿದ ದರವೇ ಇಂದಿಗೂ ಇದೆ. ಇದು ಪ್ರತಿ ಬಿಯರ್ ಕೇಸ್ ಮೇಲೆ ಅಂದಾಜು 100 ರೂ. ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಕಂಪನಿ ಅಳಲು ತೋಡಿಕೊಂಡಿದೆ.