newsics.com
ಮಳೆಗಾಲ ಶುರುವಾಗಿದೆ. ಹೀಗಾಗಿ ಇದು ಶೀತ ಮತ್ತು ಕೆಮ್ಮು ಕಾಡುವ ಸಮಯ. ಮಕ್ಕಳು ಹಾಗೂ ವಯಸ್ಕರ ಮೇಲೂ ಮಳೆಗಾಲ ಪರಿಣಾಮ ಬೀರುತ್ತದೆ. ಶೀತ, ಕೆಮ್ಮು ಬಿಡದೇ ಕಾಡಬಹುದು. ಅಂದಮಾತ್ರಕ್ಕೆ ಭಯ ಬೇಕಿಲ್ಲ. ವೈದ್ಯರ ಬಳಿಗೆ ಹೋಗಬೇಕೆಂದೇನೂ ಇಲ್ಲ. ಮನೆಯಲ್ಲೇ ಕಷಾಯ ತಯಾರಿಸಿ ಒಂದೆರಡು ದಿನ ಕುಡಿದರೆ ಶೀತ, ಕೆಮ್ಮು ದೂರವಾಗುತ್ತದೆ. ಇದು ಶೀತ, ಕೆಮ್ಮು ಅಷ್ಟೇ ಅಲ್ಲ, ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.
ಸಾಮಾನ್ಯ ಶೀತ-ಕೆಮ್ಮಿಗೆ ಕಷಾಯ ಪರಿಣಾಮಕಾರಿ ಮನೆಮದ್ದು. ಹಾಗಾದರೆ, ಈ ಕಷಾಯ ತಯಾರಿಸೋದು ಹೇಗೆ?
ಅಗತ್ಯ ಸಾಮಗ್ರಿ:
ಅರಿಶಿನ ಪುಡಿ – 1/2 ಟೀ ಸ್ಪೂನ್, 1/2 ಟೀ ಸ್ಪೂನ್ ಶುಂಠಿ ಪುಡಿ ಅಥವಾ 1/2 ಇಂಚು ಹಸಿ ಶುಂಠಿ, 1 ಟೀ ಸ್ಪೂನ್ ನಿಂಬೆ ರಸ, ಸ್ವಲ್ಪ ಲವಂಗ ಪುಡಿ, ಅರ್ಧ ಟೀ ಸ್ಪೂನ್ ದಾಲ್ಚಿನ್ನಿ ಪುಡಿ.
ತಯಾರಿಸೋದು ಹೇಗೆ?:
ನಿಂಬೆ ರಸ ಹಾಗೂ ಜೇನುತುಪ್ಪ ಹೊರತಪಡಿಸಿ ಉಳಿದ ಪದಾರ್ಥಗಳನ್ನು 5 ನಿಮಿಷ ಕಾಲ ಕುದಿಸಬೇಕು. ನಂತರ 1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದರಿಂದ ಕೆಮ್ಮು ಮತ್ತು ಶೀತ ಸಂಪೂರ್ಣ ನಿವಾರಣೆಯಾಗುತ್ತದೆ.
ಕಷಾಯ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬ್ಯಾಕ್ಟೀರಿಯಾ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಅರಿಶಿನ ತುಂಬಾ ಸಹಾಯಕ. ಇದು ಕೆಮ್ಮು-ಶೀತವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಶುಂಠಿ, ಕೆಮ್ಮು ಮತ್ತು ಶೀತಕ್ಕೆ ಮದ್ದು. ಶುಂಠಿಯು ಗಂಟಲು ನೋವು ಮತ್ತು ಕೆಮ್ಮನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸದಲ್ಲಿ ವಿಟಮಿನ್ ಸಿ ಇದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕೆಮ್ಮು ಮತ್ತು ಶೀತ ತಡೆಯಲು ಇದು ಸಹಾಯಕ.
ದಾಲ್ಚಿನ್ನಿ ಪುಡಿ ಗಂಟಲು ನೋವನ್ನು ತಡೆಯಲು ಸಹಾಯ ಮಾಡುತ್ತದೆ. ಜೇನು ಕೆಮ್ಮು ಮತ್ತು ಶೀತ ನಿವಾರಣೆಗೆ ಪರಿಣಾಮಕಾರಿ ಔಷಧ.
ಕಷಾಯಕ್ಕೆ ತಪ್ಪದೇ ಜೇನುತುಪ್ಪವನ್ನು ಸೇರಿಸಬೇಕು. ಜೇನುತುಪ್ಪದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತವೆ.
ಮಳೆಗಾಲದಲ್ಲಿ ಈ ಕಷಾಯ ಹೆಚ್ಚು ಪರಿಣಾಮಕಾರಿ. ಕೆಮ್ಮು ಮತ್ತು ಶೀತಕ್ಕೆ ಅತ್ಯುತ್ತಮ ಮನೆಮದ್ದು. ತುಂಬಾ ಚಿಕ್ಕ ಮಕ್ಕಳಿಗೆ ಕಷಾಯ ಕುಡಿಸಬೇಡಿ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪ ಪ್ರಮಾಣದಲ್ಲಿ ಕಷಾಯ ಕುಡಿಸಬಹುದು.
ಕಷಾಯ ಯಾವುದೇ ಅಡ್ಡ ಪರಿಣಾಮ ಹೊಂದಿಲ್ಲದಿರುವುದರಿಂದ ಮಳೆಗಾಲದಲ್ಲಿ ಸಾಮಾನ್ಯ ಎನ್ನಬಹುದಾದ ಶೀತ-ಕೆಮ್ಮಿಗೆ ಕಷಾಯ ಅತ್ಯುತ್ತಮ ಔಷಧ.
ಮಳೆಗಾಲ ಶುರುವಾಗಿದೆ… ಇದು ಶೀತ- ಕೆಮ್ಮಿನ ಸಮಯ, ಮನೆಯಲ್ಲೇ ಮಾಡಿ ಕುಡಿಯಿರಿ ಕಷಾಯ