newsics.com
ಬೆಂಗಳೂರು: ಇನ್ಮುಂದೆ ಮಾರುಕಟ್ಟೆಯಲ್ಲಿ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ದೊರೆಯಲಿದೆ. ಹೌದು, ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂದಿನಿ ವತಿಯಿಂದ ಪ್ರಥಮ ಬಾರಿಗೆ ತಯಾರಿಸಿರುವ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಚಿವ ವೆಂಕಟೇಶ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಕೆಎಂಎಫ್ ಅಧ್ಯಕ್ಷರಾದಂತ ಭೀಮ ನಾಯ್ಕ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾಯೋಗಿಕವಾಗಿ ಬೆಂಗಳೂರು ನಗರದಲ್ಲಿ ಈ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು, ಗ್ರಾಹಕರಿಗೆ ಕೈಗೆಟುವ ದರದಲ್ಲಿ ನೀಡಲಾಗುತ್ತಿದೆ. ದೋಸೆ ಮತ್ತು ಇಡ್ಲಿ ಹಿಟ್ಟಿನ 450 ಗ್ರಾಂ ಪ್ಯಾಕ್ಗೆ 40 ರೂ. ಹಾಗೂ 900 ಗ್ರಾಂ ಪ್ಯಾಕೇಟ್ಗೆ 80 ರೂಪಾಯಿ ದರ ನಿಗದಿ ಮಾಡಲಾಗಿದೆ.
ಆರಂಭದಲ್ಲಿ ಮಾರುಕಟ್ಟೆಗಳು ಹಾಗೂ ನಂದಿನಿ ಹಾಲಿನ ಕೇಂದ್ರಗಳಲ್ಲಿ ಇದೀಗ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮನೆ, ಮನೆಗೆ ಹಾಲನ್ನು ತಲುಪಿಸುವ ಮಾದರಿಯಲ್ಲಿಯೇ ಇಡ್ಲಿ ಅಥವಾ ದೋಸೆ ಹಿಟ್ಟುಗಳನ್ನು ಕೂಡ ಸರಬರಾಜು ಮಾಡುವುದಕ್ಕೆ ಚಿಂತನೆ ಮಾಡಲಾಗಿದೆ.