newsics.com
Mandya Sahitya Sammelana: ಮಂಡ್ಯದಲ್ಲಿ ಶುಕ್ರವಾರ ಆರಂಭಗೊಂಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ ಹಕ್ಕೊತ್ತಾಯಗಳನ್ನು ಸಮ್ಮೇಳನಾಧ್ಯಕ್ಷ ಗೊರುಚ ಮಂಡಿಸಿದರು.
ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಿಕ್ಷಣವೇ ಇರಬೇಕು. ಇಂಗ್ಲೀಷ್ ಸಹಿತ ಬೇರಾವ ಭಾಷೆಯ ಶಿಕ್ಷಣ ಮಾಧ್ಯಮವಾಗಿ ಕರ್ನಾಟಕದಲ್ಲಿ ಹೇರಕೂಡದು. ಹಾಗೆಂದು ಇಂಗ್ಲೀಷ್ ಭಾಷೆಯ ಪ್ರತ್ಯೇಕ ಕಲಿಕೆಗೆ ಪ್ರಬಲವಾದ ವ್ಯವಸ್ಥೆ ಜಾರಿಯಾಗಬೇಕು. ಇಂಗ್ಲೀಷ್ ಶಿಕ್ಷಕರನ್ನು ಪ್ರತೀ ಶಾಲೆಗಳಿಗೂ ನೇಮಿಸಬೇಕು.
ಪ್ರಾಥಮಿಕ ಒಂದನೆಯ ತರಗತಿಯಿಂದ ಹತ್ತನೇ ತರಗತಿವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನೂ ಶಿಕ್ಷಣ ಮಾಧ್ಯಮವಾಗಿ ಹೇರಕೂಡದು. ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎನ್ನುವ ಹಕ್ಕೊತ್ತಾಯ ಮಂಡ್ಯದಲ್ಲಿ ಶುಕ್ರವಾರ ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿ ಬಂದಿತು.
ಸಮ್ಮೇಳನಾಧ್ಯಕ್ಷರಾಗಿರುವ ವಿದ್ವಾಂಸ ಗೊರು ಚನ್ನಬಸಪ್ಪ ಅವರು ಕನ್ನಡ ಭಾಷಾ ಮಾಧ್ಯಮ, ಕನ್ನಡಿಗರಿಗೆ ಉದ್ಯೋಗ ಸೇರಿದಂತೆ 21 ಹಕ್ಕೊತ್ತಾಯಗಳನ್ನು ಮಂಡಿಸಿದರು.