newsics.com
ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಗುಡ್ ನ್ಯೂಸ್ ನೀಡಿದೆ. ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಚೀನಾದ ಚಾಲಕ ರಹಿತ ಮೆಟ್ರೋ ರೈಲು ಹೊಸ ವರ್ಷದಿಂದ ಸಂಚಾರ ಶುರು ಮಾಡಲಿದ್ದು, ಬೊಮ್ಮನಹಳ್ಳಿ ಟು ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಜಾಮ್ ಗೆ ಮುಕ್ತಿ ಸಿಗಲಿದೆ. ಈಗಾಗಲೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಮುಗಿಸಿರುವ ಚಾಲಕರಹಿತ ಮೆಟ್ರೋಗೆ, ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಈಗಾಗಲೇ ಹಸಿರುನಿಶಾನೆ ತೋರಿದ್ದಾರೆ.
ಜನವರಿಯಿಂದ ಆರ್ವಿ ರೋಡ್ – ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ. ಇನ್ಫೋಸಿಸ್ ಸೇರಿದಂತೆ ಸಾವಿರಾರು ಐಟಿ ಬಿಟಿ ಕಂಪನಿಗಳಿಗೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ಚಾಲಕ ರಹಿತ ಮೆಟ್ರೋ ಮಾರ್ಗ 19.15 ಕಿಮೀ ಇದ್ದು, ಆರ್ವಿ ರೋಡ್ ಹಾಗೂ ಬೊಮ್ಮಸಂದ್ರದ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ ಬರೋಬ್ಬರಿ 16 ಸ್ಟೇಷನ್ ಗಳಿವೆ. ಅಲ್ಲದೇ, ಬೋಗಿಗಳಲ್ಲಿ 24 ಸಿಸಿ ಟಿವಿ ಅಳವಡಿಸಲಾಗಿದ್ದು, ಮುಂಭಾಗದಲ್ಲಿ 2 ಸಿಸಿಟಿವಿ ಇರಲಿದ್ದು, ಇವು ಪ್ರಯಾಣದ ದೃಶ್ಯವನ್ನು ಸೆರೆ ಹಿಡಿಯಲಿವೆ. ಈ ಮೆಟ್ರೋ ಎತ್ತರಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಲಿದೆ. ರಸ್ತೆ, ಮೇಲ್ಸೇತುವೆ, ಅದರ ಮೇಲ್ಭಾಗದಲ್ಲಿ ಈ ಮೆಟ್ರೋ ಸಂಚರಿಸುವ ನಿಲ್ದಾಣ ಇರಲಿದ್ದು, ಇದರ ಮತ್ತೊಂದು ವಿಶೇಷತೆಯಾಗಿದೆ.