newsics.com
ಚೆನ್ನೈ: ಅನುಮತಿಯಿಲ್ಲದೆ ಚಿತ್ರದ ಮೂರು ಸೆಕೆಂಡ್ ತುಣುಕನ್ನು ಪ್ರದರ್ಶಿಸಿದಕ್ಕೆ ನಯನತಾರ ಮತ್ತು ನೆಟ್ ಫ್ಲಿಕ್ಸ್ ವಿರುದ್ಧ ₹10 ಕೋಟಿ ಬೇಡಿಕೆ ಇಟ್ಟು ಕಾನೂನು ನೋಟಿಸ್ ಕಳುಹಿಸಿದ ನಟ ಧನುಷ್ ವಿರುದ್ಧ ನಟಿ ನಯನತಾರಾ ಬಹಿರಂಗ ಪತ್ರ ಬರೆದು ವಾಗ್ದಾಳಿ ನಡೆಸಿದ್ದಾರೆ.
ಹೌದು, ಇತ್ತೀಚೆಗೆ ನೆಟ್ ಫ್ಲಿಕ್ಸ್ನಲ್ಲಿ ನಯನತಾರ ಜೀವನದ ಬಗ್ಗೆ ʼನಯನತಾರ:ಬಿಯಾಂಡ್ ದಿ ಫೇರಿಟೇಲ್ʼ ಡಾಕ್ಯೂಮೆಂಟರಿಯ ಟ್ರೇಲರ್ ರಿಲೀಸ್ ಆಗಿದೆ. ಇದೇ ವಿಚಾರವಾಗಿ ಧನುಷ್ ಅವರು ಕಾಪಿ ರೈಟ್ಸ್ ನೋಟಿಸ್ ಕಳುಹಿಸಿ 10 ಕೋಟಿ ರೂ.ಪರಿಹಾರ ಕೇಳಿದ್ದಾರೆ ಎಂದು ನಯನತಾರ ಅವರೇ ಪತ್ರದ ಮೂಲಕ ಬಹಿರಂಗಪಡಿಸಿದ್ದಾರೆ.
ಏನಿದು ವಿಚಾರ?: 2015ರಲ್ಲಿ ನಯನತಾರಾ – ವಿಜಯ್ ಸೇತುಪತಿ ಅವರು ʼನಾನೂಮ್ ರೌಡಿಧಾನ್ʼ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ನಯನತಾರಾ ಪತಿ ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದರು. ನಟ ಧನುಷ್ ನಿರ್ಮಾಣ ಮಾಡಿದ್ದರು. ಇದೇ ಸಿನಿಮಾದ ಕೆಲ ದೃಶ್ಯಗಳನ್ನು ತಮ್ಮ ಸಾಕ್ಷ್ಯ ಚಿತ್ರಕ್ಕೆ ಬಳಸಿಕೊಳ್ಳುವುದಾಗಿ ನಯನತಾರಾ ಅವರ ತಂಡ ಧನುಷ್ ಅವರಲ್ಲಿ ಕೇಳಿತ್ತು. ಆದರೆ ಧನುಷ್ ಇದನ್ನು ಒಪ್ಪಿರಲಿಲ್ಲ. ಇದರಿಂದಾಗಿ ಸಾಕ್ಷ್ಯ ಚಿತ್ರದ ತಂಡದವರು ʼನಾನೂಮ್ ರೌಡಿಧಾನ್ʼ ಚಿತ್ರದ ತೆರೆಮರೆಯ ದೃಶ್ಯಗಳನ್ನು ಸಾಕ್ಷ್ಯಚಿತ್ರದ ಟ್ರೇಲರ್ನಲ್ಲಿ ಬಳಸಿಕೊಳ್ಳಲಾಗಿದೆ. ಕೇವಲ 3 ಸೆಕೆಂಡ್ಗಳ ದೃಶ್ಯವನ್ನು ಬಳಸಿದ್ದಕ್ಕಾಗಿ ಧನುಷ್ ಅವರು ನಯನತಾರಾ ಅವರ ತಂಡಕ್ಕೆ 10 ಕೋಟಿ ರೂ. ಪರಿಹಾರ ಕೇಳಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಸಿನಿಮಾದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ, ಒಂಟಿ ಮಹಿಳೆಯಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಅಭಿಮಾನಿಗಳ ಬೆಂಬಲದಿಂದ ಈ ಹಂತಕ್ಕೆ ತಲುಪಿರುವುದಾಗಿ ನಯನತಾರಾ ಪತ್ರದಲ್ಲಿ ಹೇಳಿದ್ದಾರೆ.