newsics.com
ಹಾವೇರಿ: ವಕ್ಫ್ ಆಸ್ತಿ ಗಲಾಟೆ ಹಿನ್ನೆಲೆ 28ಕ್ಕೂ ಅಧಿಕ ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಹಾವೇರಿ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ನಡೆದಿದೆ.
ಕಡಕೋಳದಲ್ಲಿ ನಿನ್ನೆ ತಡರಾತ್ರಿ ವಕ್ಫ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಮನೆಗಳ ಖಾತಾ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗುತ್ತಿದೆ ಎಂಬ ಆತಂಕದಿಂದ ಉದ್ರಿಕ್ತರು ಗಲಾಟೆ ನಡೆಸಿದ್ದರು. ಉದ್ರಿಕ್ತ ಗುಂಪು ಇನ್ನೊಂದು ಗುಂಪಿನ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ, ಹಲ್ಲೆ ನಡೆಸಿತ್ತು. ಗಲಾಟೆಯಲ್ಲಿ ಒಟ್ಟು ಐವರು ಗಾಯಗೊಂಡಿದ್ದರು.
ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಎಸ್ಪಿ ಅಂಶುಕುಮಾರ್ ಶ್ರೀವಾಸ್ತವ ಮತ್ತಿತರರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಗುರುತಿಸಿ ಬಂಧಿಸಿದ್ದು, ಗ್ರಾಮಸ್ಥರೊಂದಿಗೆ ಮಾತನಾಡಿದ್ದಾರೆ ಮತ್ತು ಜನರನ್ನು ಪ್ರಚೋದಿಸುವವರನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಯಾಳುಗಳನ್ನು ಸವಣೂರು ಮತ್ತು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮದಲ್ಲಿ 100ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಐಜಿಪಿ ರಮೇಶ್ ಬಾನೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 28ಕ್ಕೂ ಅಧಿಕ ಜನರನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಪೊಲೀಸ್ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ.