newsics.com
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಕೊನೆಗೂ ಸೆರೆಮನೆ ವಾಸದಿಂದ ಮುಕ್ತಿ ಸಿಕ್ಕಿದೆ.
ಹೌದು, ಹೈಕೋರ್ಟ್ ಪೀಠ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ವೈದ್ಯಕೀಯ ಚಿಕಿತ್ಸೆಯ ಆಧಾರದಲ್ಲಿ ಹೈಕೋರ್ಟ್ ನ್ಯಾಯಾಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಬಳ್ಳಾರಿ ಸೆಂಟ್ರಲ್ ಜೈಲ್ನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಣೆ ಪಡೆಯಲು ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡುವಂತೆ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಪೀಠದ ಮುಂದೆ ಮನವಿ ಸಲ್ಲಿಸಿದ್ದರು. ದರ್ಶನ್ ಜಾಮೀನು ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ಆಕ್ಷೇಪ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳು ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಬೆಳಗ್ಗೆ ಆದೇಶ ಪ್ರಕಟಿಸಿದ ನ್ಯಾಯಮೂರ್ತಿಗಳು ದರ್ಶನ್ ಅವರಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದರು.
ಷರತ್ತುಗಳು ಅನ್ವಯ
ಇನ್ನು ನಟ ದರ್ಶನ್ ಗೆ ನೀಡಲಾಗಿರುವ ಮಧ್ಯಂತರ ಜಾಮೀನಿಗೆ ಹೈಕೋರ್ಟ್ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ. ಜಾಮೀನು ಪಡೆದ ಬಳಿಕ ಒಂದು ವಾರದಲ್ಲಿ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್ ಗೆ ನೀಡಬೇಕು ಎಂದು ಹೇಳಿದೆ. ಅಲ್ಲದೆ ದರ್ಶನ್ ಪಾಸ್ಪೋರ್ಟ್ ಅನ್ನು ಕೋರ್ಟ್ ಸುಪರ್ಧಿಗೆ ನೀಡಬೇಕು ಎಂದು ಹೇಳಿದೆ.